ನೌಕಾನೆಲೆ ಭದ್ರತೆಗಾಗಿ ಕಾರವಾರದಲ್ಲಿ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಜನರ ಜೀವದ ಜೊತೆ ಆಟವಾಡುತ್ತಿದೆ. ಕಪೌಂಡ್ ನಿರ್ಮಾಣ ನೆಪದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಹಿಡಿದ ಕಂಬವನ್ನು ಜೆಸಿಬಿ ಯಂತ್ರಗಳ ಮೂಲಕ ಗುತ್ತಿಗೆ ಕಂಪನಿ ನೆಲಕ್ಕುರುಳಿಸಿದೆ.
ಸದ್ಯ ಕಾರವಾರದ ಸಂಕ್ರುಭಾಗ ಘಟ್ಟದ ಬಳಿ ನೇವಲ್ ಬೇಸ್ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಘುಸನ್ ಇನ್ಫ್ರಾ ಇಂಜಿ ಪ್ರೆ ಲಿ ಎಂಬ ಕಂಪನಿ ಈ ಕೆಲಸದ ಗುತ್ತಿಗೆ ಪಡೆದಿದೆ. ಒಂದಿಲ್ಲೊoದು ಅವಾಂತರ ನಡೆಸುತ್ತಿರುವ ಈ ಕಂಪನಿ ಗುರುವಾರ ಸಂಜೆ ಹೆದ್ದಾರಿ ಅಂಚಿನ ವಿದ್ಯುತ್ ಕಂಬವನ್ನು ಮುರಿದಿದೆ.
ಫೆ 27ರಂದು ಭದ್ರತಾ ಕಾಮಗಾರಿ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ಸಂಚರಿಸಿದ ಜೆಸಿಬಿ ರಸ್ತೆ ಅಂಚಿನಲ್ಲಿದ್ದ ಹೈ ವೋಲ್ಟೇಜ್’ನ 11 ಕೆವಿ ವಿದ್ಯುತ್ ಕಂಬವನ್ನು ನೆಲಕ್ಕುರುಳಿಸಿದೆ. ಅತ್ಯಂತ ನಾಜೂಕಿನಿಂದ ಕಪೌಂಡ್ ನಿರ್ಮಾಣ ಕೆಲಸ ಮಾಡುವ ಬದಲು ಹೆದ್ದಾರಿ ಪ್ರಯಾಣಿಕರಿಗೆ ಅನಗತ್ಯ ತೊಂದರೆಯಾಗುವAತೆ ಇಲ್ಲಿ ಕೆಲಸ ಮಾಡಲಾಗುತ್ತಿದೆ. ಜೆಸಿಬಿ ಆಪರೇಠರ್ ಜರಿಲಾಲ ಮಹತೋ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುವ ರವಿಕುಮಾರ ಗುಪ್ತ ಸೇರಿ ಹೆಸ್ಕಾಂ ಆಸ್ತಿಗೆ ಹಾನಿ ಮಾಡಿದ್ದಾರೆ.
ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುರಿದ ಪರಿಣಾಮ ಹೆದ್ದಾರಿ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಕೆಲ ಕಾಲ ವಾಹನ ಸಂಚಾರವನ್ನು ತಡೆಹಿಡಿಯಲಾಗಿದ್ದು, ಟ್ರಾಫಿಕ್ ಸಮಸ್ಯೆ ಅನುಭವಿಸಿದರು. ಹೆಸ್ಕಾಂ ಗ್ರಾಮೀಣ ಶಾಖೆಯ ಶಾಖಾಧಿಕಾರಿ ಮಹೇಂದ್ರ ಎಚ್ ಎನ್ ಆಗಮಿಸಿ ವಿದ್ಯುತ್ ಸಂಪರ್ಕ ತಪ್ಪಿಸಿದರು. ಕೊನೆಗೆ ಹೆಸ್ಕಾಂ ಸಿಬ್ಬಂದಿ ಹರಸಾಹಸ ನಡೆಸಿ ಅಪಾಯ ತಪ್ಪಿಸಿದರು. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ಕಂಬವನ್ನು ಸರಿಪಡಿಸಿದರು. ಇದಾದ ನಂತರ ಹೆಸ್ಕಾಂ ಶಾಖಾಧಿಕಾರಿ ಮಹೇಂದ್ರ ಎಚ್ ಎನ್ ಅವರು ಕಂಪನಿ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದರು.