ಕಡಲ ಆಮೆಗಳ ಸಂತಾನೋತ್ಪತ್ತಿಗೆ ಇದೀಗ ಸಕಾಲ. ಕಡಲತೀರದ ದಿಬ್ಬಕ್ಕೆ ಬರುವ ಆಮೆಗಳು ಅಲ್ಲಿ ಮೊಟ್ಟೆಯಿಟ್ಟು ತೆರಳುತ್ತಿದ್ದು, ಆ ಮೊಟ್ಟೆಗಳನ್ನು ಕಾಣಿಸಿಕೊಟ್ಟವರಿಗೆ ಅರಣ್ಯ ಇಲಾಖೆ ಸಾವಿರ ರೂ ಸಿಗುತ್ತದೆ!
ಪರಿಸರ ಸಂರಕ್ಷಣೆಯಲ್ಲಿ ಆಮೆಗಳ ಪಾತ್ರ ಬಹುದೊಡ್ಡದು. ಅದರಲ್ಲಿಯೂ ಕಡಲ ಆಮೆಗಳ ಜೀವನಶೈಲಿ ವಿಭಿನ್ನ. ಹೀಗಾಗಿ ಕಡಲ ಆಮೆಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ನಾನಾ ಕಸರತ್ತು ನಡೆಸುತ್ತಿದೆ. ಮೊಟ್ಟೆಯಿಡುವ ಆಮೆಗಳ ಬಾಣಂತನ ಎಂದರೆ ಅರಣ್ಯ ಸಿಬ್ಬಂದಿಗೂ ಸಡಗರದ ಸಂಗತಿ. ಹೀಗಾಗಿ ಕಡಲತೀರಕ್ಕೆ ಬರುವ ಅತಿಥಿಗೆ ಈ ಅವಧಿಯಲ್ಲಿ ವಿಶೇಷ ಮನ್ನಣೆಯಿದೆ.
ಆಮೆ ಮೊಟ್ಟೆ ಇಟ್ಟ ತಕ್ಷಣ ನಾಯಿ – ನರಿ ಸೇರಿ ಆಕ್ರಮಣ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಆಮೆ ಮೊಟ್ಟೆಗೆ ಕಾಳ ಸಂತೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯಿದೆ. ಹೀಗಾಗಿ ಅದನ್ನು ಸಂರಕ್ಷಿಸುವುದು ಸವಾಲಿನ ಕೆಲಸ. ಆಮೆ ಮೊಟ್ಟೆ ಇಟ್ಟಿರುವ ಸಂಗತಿಯನ್ನು ಗುರುತಿಸಿ ಇಲಾಖೆಗೆ ಮಾಹಿತಿ ನೀಡುವವರ ಸಂಖ್ಯೆಯೂ ವಿರಳ. ಈ ಹಿನ್ನಲೆ ಅರಣ್ಯ ಇಲಾಖೆ ಆಮೆಗಳ ಬಗ್ಗೆ ಜನರಿಗೆ ಪ್ರೀತಿ ಮೂಡಿಸಲು ಮೊಟ್ಟೆ ಕಾಣಿಸಿದವರಿಗೆ ಕಾಸು ಕೊಡುತ್ತಿದೆ.
ಆಮೆ ಮೊಟ್ಟೆ ಗುರುತಿಸುವುದು ಹೇಗೆ?
ಡಿಸೆಂಬರ್’ನಿoದ ಫೆಬ್ರವರಿ ಅಂತ್ಯದವರೆಗೂ ಆಮೆ ಮೊಟ್ಟೆಯಿಡುತ್ತದೆ. ನಸುಕಿನ ಅವಧಿಯಲ್ಲಿ ಕಡಲತೀರ ಸಂಚಾರ ನಡೆಸುವವರಿಗೆ ಕಡಲ ಆಮೆ ಮೊಟ್ಟೆ ಕಾಣಿಸುವ ಸಾಧ್ಯತೆ ಹೆಚ್ಚು. ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಗುರುತಿಸುತ್ತಾರೆ.
ಮೊಟ್ಟೆಗಳನ್ನಿಡಲು ದಡಕ್ಕೆ ಬರುವ ಆಮೆ ಕಡಲ ಮರಳಿನ ಮೇಲೆ ವಾಹನ ಚಕ್ರ ಓಡಾಡಿದ ರೀತಿ ಕುರುಹು ಬಿಡುತ್ತದೆ. ಅದನ್ನು ಆಧರಿಸಿ ಹುಡುಕಾಟ ನಡೆಸಿದರೆ ಮರಳಿನಲ್ಲಿ ಅಡಗಿದ ಆಮೆ ಮೊಟ್ಟೆ ಕಾಣುತ್ತದೆ. ಮೊಟ್ಟೆಯನ್ನು ಯಾವ ಪ್ರಾಣಿಯೂ ಮುಟ್ಟದಂತೆ ಕಾಪಾಡಿ, ಅರಣ್ಯ ಸಿಬ್ಬಂದಿಗೆ ಫೋನಾಯಿಸಿದರೆ ನಮ್ಮ-ನಿಮ್ಮ ಕೆಲಸ ಮುಗಿಯಿತು.
ಕುಮಟಾದ ದುಬ್ಬಿನಸಸಿ ಕಡಲತೀರದಲ್ಲಿ ಗುರುವಾರ ರಾತ್ರಿ ಕಡಲ ಆಮೆ ಮೊಟ್ಟೆಯಿಟ್ಟಿದೆ. ಈ ಮಾಹಿತಿ ಆಧರಿಸಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಮೆ ಮೊಟ್ಟೆಯ ಸುದ್ದಿ ಮುಟ್ಟಿಸಿದವರಿಗೆ ಸ್ಥಳದಲ್ಲಿಯೇ ಸಾವಿರ ರೂ ನೀಡಿದ್ದಾರೆ. ಒಟ್ಟು 130 ಮೊಟ್ಟೆಗಳಿಗೆ ಅವರು ಭದ್ರತೆ ಒದಗಿಸಿದ್ದಾರೆ. ಎಲ್ಲಾ ಮೊಟ್ಟೆಗಳನ್ನು ಗಂಗೆಕೊಳ್ಳದ ಸಂರಕ್ಷಣಾ ಕೇಂದ್ರದಲ್ಲಿ ರಕ್ಷಿಸಲಾಗಿದ್ದು, 45 ದಿನಗಳ ನಂತರ ಮರಿಗಳು ಹೊರಬರಲಿವೆ.
ಕಳೆದ ವರ್ಷ ಅರಣ್ಯ ಇಲಾಖೆ 8 ಸಾವಿರ ಮೊಟ್ಟೆಗಳನ್ನು ಸಂರಕ್ಷಿಸಿತ್ತು. ಆಮೆ ಮರಿಗಳನ್ನು ಶಾಲಾ ಮಕ್ಕಳು ಸಮುದ್ರಕ್ಕೆ ಬಿಟ್ಟು ಸಂಭ್ರಮಿಸಿದ್ದರು. ಈ ವರ್ಷ ಈವರೆಗೆ ಮೂರು ಗೂಡು ಗುರುತಿಸಲಾಗಿದ್ದು, 310 ಮೊಟ್ಟೆಗಳು ಸಿಕ್ಕಿದೆ. `ಆಮೆ ಮೊಟ್ಟೆಯಿಟ್ಟಿರುವ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ಮೊದಲಿನಿಂದಲೂ ಗೌರವಧನ ಕೊಡುವ ಪದ್ಧತಿಯಿದೆ. ಮೊದಲು 400 ರೂ ಕೊಡಲಾಗುತ್ತಿತ್ತು. ನಂತರ 600ರೂ ಇದ್ದು, ಇದೀಗ 1 ಸಾವಿರ ರೂ ನೀಡಲಾಗುತ್ತದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು.