ಯಲ್ಲಾಪುರ: ಸರ್ಕಾರಿ ಹಣದಲ್ಲಿ ನಿರ್ಮಿಸಲಾದ ಶೌಚಾಲಯಗಳು ನಿರ್ವಹಣೆ ಕೊರತೆ, ಅಶುಚಿತ್ವ ಕಾರಣದಿಂದ ಕಟ್ಟಡಗಳು ಪಾಳು ಬೀಳುವುದೇ ಜಾಸ್ತಿ. ಹೀಗಿರುವಾಗ ಆನಗೋಡಿನ ಗೋಪಾಲಕೃಷ್ಣ ದೇವಾಲಯದ ಉತ್ತಮ ನಿರ್ವಹಣೆ ನೋಡಿ ಸರ್ಕಾರ ಗ್ರಾಮ ಪಂಚಾಯತಗೆ ಪ್ರಶಸ್ತಿ ನೀಡಿದೆ.
2022ರಲ್ಲಿ 3 ಲಕ್ಷ ರೂ ಹಣ ವಿನಿಯೋಗಿಸಿ ಆನಗೋಡು ಗೋಪಾಲಕೃಷ್ಣ ದೇವಾಲಯದ ಬಳಿ ಗ್ರಾಮ ಪಂಚಾಯತದಿAದ ಶೌಚಾಲಯ ನಿರ್ಮಿಸಲಾಗಿದೆ. ಎಸ್ಡಿಎಂ ಹಾಗೂ 15ನೇ ಹಣಕಾಸು ಯೋಜನೆ ಹಣವನ್ನು ಇಲ್ಲಿ ವಿನಿಯೋಗಿಸಲಾಗಿದ್ದು, ಪ್ರಸ್ತುತ ದೇವಾಲಯ ಆಡಳಿತ ಮಂಡಳಿಯವರು ಶೌಚಾಲಯದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಶೌಚಾಲಯದಲ್ಲಿ ಶುಚಿತ್ವ ಕಾಪಾಡಿಕೊಂಡಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿದಾಗ ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಗಮನಿಸಿದ್ದರು.
ನವೆಂಬರ್ 19ರಿಂದ ಡಿಸೆಂಬರ್ 10ರವರೆಗೆ `ನಮ್ಮ ಶೌಚಾಲಯ ನಮ್ಮ ಗೌರವ’ ಶೀರ್ಷಿಕೆ ಅಡಿ ಜಿಲ್ಲಾ ಪಂಚಾಯತ ಅಭಿಯಾನ ನಡೆಸುತ್ತಿದ್ದು, ಇಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳು ಆನಗೋಡು ದೇವಾಲಯದ ನಿರ್ವಹಣೆಯಲ್ಲಿರುವ ಶೌಚಾಲಯದ ಬಗ್ಗೆ ಪ್ರಸ್ತಾಪಿಸಿದ್ದರು. ಅಧಿಕಾರಿಗಳ ತಂಡದವರು ಶೌಚಲಯ ಗಮನಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಸೋಮವಾರ ಕುಮಟಾ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು, ಆನಗೋಡು ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಕೆಳಗಿನಪಾಲ್ ಹಾಗೂ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ನಾರಾಯಣ ಗೌಡ ಪ್ರಶಸ್ತಿ ಪಡೆದರು. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ ಕಾಂದು ಪ್ರಶಸ್ತಿ ವಿತರಿಸಿದರು. ಯಲ್ಲಾಪುರ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ, ನರೆಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ್ ಇದ್ದರು.