ಶಿರಸಿ: ರಾಘವೇಂದ್ರ ಮಠದ ಸರ್ಕಲ್ ಬಳಿ ಶೌಚಾಲಯ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ವಿರೋಧಕ್ಕೆ ನಗರಸಭೆ ಮಣಿದಿದೆ.
ಶುಕ್ರವಾರ ನಗರಸಭೆ ಅಧಿಕಾರಿಗಳು ಇಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಚರ್ಚಿಸಿದ್ದರು. ಅದರ ಪ್ರಕಾರ ಕಾಮಗಾರಿಯ ಕೆಲಸವನ್ನು ಶುರು ಮಾಡಿದ್ದರು. ಈ ವೇಳೆ ಅನೇಕರು ಸ್ಥಳಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದರು. `ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಅದರ ನಿರ್ವಹಣೆ ಸರಿಯಾಗಿರುವುದಿಲ್ಲ. ಅದರಿಂದ ಅನೇಕರಿಗೆ ಸಮಸ್ಯೆ ಆಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
`ಮಠ ಹಾಗೂ ದೇವಾಲಯಕ್ಕೆ ತೆರಳುವ ದಾರಿ ಬಳಿ ಶೌಚಾಲಯ ನಿರ್ಮಿಸುವುದು ಸರಿಯಲ್ಲ. ಇದರಿಂದ ಭಕ್ತರು ಮುಜುಗರಕ್ಕೆ ಒಳಗಾಗುತ್ತಾರೆ. ಶೌಚಾಲಯದ ಮಾಲಿನ್ಯದಿಂದ ಸುತ್ತಲಿನ ಪರಿಸರ ಸಹ ಗಬ್ಬು ನಾರಲಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.
ಸಾರ್ವಜನಿಕ ವಿರೋಧದ ಹಿನ್ನಲೆ ರಾಘವೇಂದ್ರ ಮಠದ ಬಳಿ ನಗರಸಭೆ ನಿರ್ಮಿಸಲು ನಿರ್ಣಯಿಸಿದ್ದ ಶೌಚಾಲಯ ಕಾಮಗಾರಿಯನ್ನು ಸ್ಥಗಿತಗೊಳಿಸಿತು. ಪ್ರಸ್ತುತ `ತಾತ್ಕಾಲಿಕವಾಗಿ ಕೆಲಸ ಸ್ಥಗಿತ ಮಾಡಲಾಗಿದ್ದು, ಮತ್ತೆ ಕಾಮಗಾರಿ ಮುಂದುವರೆದಲ್ಲಿ ಹೋರಾಟ ಅನಿವಾರ್ಯ’ ಎಂದು ಅಲ್ಲಿನವರು ಎಚ್ಚರಿಸಿದರು.