ಕುಡಿಯುವ ನೀರುಪಡೆದು ಅದರ ತೆರಿಗೆ ಪಾವತಿ ಮಾಡದವರ ನೀರಿನ ಸಂಪರ್ಕ ಕಡಿತಗೊಳಿಸಲು ಶಿರಸಿ ನಗರಸಭೆ ನಿರ್ಧರಿಸಿದೆ. ಹೀಗಾಗಿ ಕಾಸು ಕೊಟ್ಟವರಿಗೆ ಮಾತ್ರ ಇಲ್ಲಿ ಕುಡಿಯಲು ನೀರು ಸಿಗುತ್ತದೆ!
ಶಿರಸಿ ನಗರದಲ್ಲಿ 12 ಸಾವಿರಕ್ಕೂ ಹೆಚ್ಚಿನ ಜನ ನಗರಸಭೆಯ ಕುಡಿಯುವ ನೀರು ಪಡೆಯುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವವರ ಸಂಖ್ಯೆ ಆ ಪ್ರಮಾಣದಲ್ಲಿಲ್ಲ. ಹೀಗಾಗಿ ತೆರಿಗೆ ವಸೂಲಿಗಾಗಿ ಕಷ್ಟಪಡುತ್ತಿರುವ ನಗರಸಭೆ ಮಾನವೀಯತೆಯನ್ನು ಮೀರಿ ನಲ್ಲಿ ಸಂಪರ್ಕ ಕಡಿತದ ತಯಾರಿ ನಡೆಸಿದೆ.
ಪ್ರತಿ ವರ್ಷವೂ ನಗರಸಭೆ ನೀರಿನ ಕರ ಪಾವತಿಸಿ ಎಂದು ಸೂಚಿಸುತ್ತದೆ. ವಾರ್ಷಿಕ 3 ಸಾವಿರ ರೂ ಒಳಗೆ ಜನ ನೀರಿನ ಹಣ ಪಾವತಿಸಬೇಕಿದೆ. ನೀರು ಮಾರಾಟದಿಂದಲೇ ನಗರಸಭೆಗೆ 3.90 ಕೋಟಿ ರೂ ಆದಾಯವಿದೆ. ಸರಿ ಸುಮಾರು 3 ಸಾವಿರಕ್ಕೂ ಅಧಿಕ ಜನ ಈವರೆಗೂ ಕರ ಪಾವತಿಸಿಲ್ಲ. ಇದರಿಂದ 1.90 ಕೋಟಿ ರೂ ನಗರಸಭೆಗೆ ನೀರಿನ ಕರ ಪಾವತಿಯಾಗಬೇಕಿದೆ. ಆ ಹಣ ವಸೂಲಾತಿಗಾಗಿ ಇದೀಗ ಕಠಿಣ ಕ್ರಮ ಜರುಗಿಸಿದೆ.
ಶಿರಸಿ ಜನರಿಗೆ ನೀರಿನ ಕರ ಪಾವತಿಗೆ ಮಾಸಿಕ ಆಯ್ಕೆಗಳಿವೆ. ವಾರ್ಷಿಕ ಒಮ್ಮೆಯೂ ತೆರಿಗೆ ಪಾವತಿಸುವ ಅವಕಾಶವಿದೆ. ಕರ ಪಾವತಿಸಿದವರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಅದಾಗಿಯೂ ಹಣ ಪಾವತಿ ಮಾಡದವರ ನೀರು ಪೂರೈಕೆ ಕಡಿತವಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಈಗಾಗಲೇ ನಗರದಲ್ಲಿ ಸುತ್ತಾಡಿದ ಅಧಿಕಾರಿಗಳು ಮೈಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅದರೊಂದಿಗೆ ಅಲ್ಲಲ್ಲಿ ಸಂಪರ್ಕ ಕಡತದ ಕೆಲಸವನ್ನು ಶುರು ಮಾಡಿದ್ದಾರೆ.