ವಸತಿಗೃಹ, ಬಾಡಿಗೆ ಬೈಕ್ ಹಾಗೂ ಬಸ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಲು ಯತ್ನಿಸಿದ್ದ ಪ್ರವಾಸಿಗನನ್ನು ಗೋಕರ್ಣದ ಜನ ತಡೆದಿದ್ದಾರೆ. ಆತ ವಂಚಿಸಲು ಯತ್ನಿಸಿದ ಎಲ್ಲಾ ಹಣವನ್ನು ಅವರವರಿಗೆ ನೀಡಿದ ನಂತರವೇ ಬಿಟ್ಟು ಕಳುಹಿಸಿದ್ದಾರೆ.
ಆಂದ್ರ ಪ್ರದೇಶ ಮೂಲದ ವಿನೀತ್ ಕೃಷ್ಣ ಎಂಬಾತರು 15 ದಿನಗಳ ಹಿಂದೆ ಗೋಕರ್ಣಕ್ಕೆ ಬಂದಿದ್ದರು. ವಸತಿಗೃಹದಲ್ಲಿ ವಾಸವಾಗಿದ್ದ ಅವರು ಅಲ್ಲಿ ಹಣ ಪಾವತಿ ಮಾಡಿರಲಿಲ್ಲ. ಜೊತೆಗೆ ಬಾಡಿಗೆ ಬೈಕ್ ಪಡೆದು ಅಲ್ಲಿ-ಇಲ್ಲಿ ಸುತ್ತಾಟ ನಡೆಸಿದ್ದರು. ಆದರೆ, ಬೈಕಿನ ಬಾಡಿಗೆ ಸಹ ನೀಡಿರಲಿಲ್ಲ. ಈ ವೇಳೆ ಅನೇಕ ಗೂಡಂಗಡಿಕಾರರಿಗೆ ಸಹ ಆನ್ಲೈನ್ ಮೂಲಕ ಹಣ ಪಾವತಿಸಿರುವುದಾಗಿ ತಿಳಿಸಿ ವಸ್ತು ಖರೀದಿಸಿದ್ದರು. ಆದರೆ, ಆನ್ಲೈನ್ ಮೂಲಕ ಪಾವತಿಯಾದ ಹಣ ಗೂಡಂಗಡಿಕಾರರ ಖಾತೆಗೆ ಜಮಾ ಆಗಿರಲಿಲ್ಲ.
ಭಾನುವಾರ ಗೋಕರ್ಣದ ಮೇಲಿನಕೇರಿ ಬಳಿ ತಾವು ಪಡೆದಿದ್ದ ಬಾಡಿಗೆ ಬೈಕ್ ನಿಲ್ಲಿಸಿ ಬಸ್ ಹತ್ತಿದ್ದರು. ಬಸ್ ಸಿಬ್ಬಂದಿಗೂ ಬೆಂಗಳೂರು ತಲುಪಿದ ನಂತರ ಹಣ ಪಾವತಿಸುವ ಭರವಸೆ ನೀಡಿದ್ದರು. ಆದರೆ, ಮೇಲಿನಕೇರಿ ಬಳಿ ನಿಂತಿದ್ದ ಬೈಕ್ ಬಗ್ಗೆ ಅನುಮಾನವ್ಯಕ್ತಪಡಿಸಿದ ಅಲ್ಲಿನ ಜನ ವಿನೀತ್ ಕೃಷ್ಣ ಅವರನ್ನು ಅಡ್ಡಗಟ್ಟಿದರು. ಆಗ, ಬೈಕನ್ನು ಮಾಲಕರಿಗೆ ಒಪ್ಪಿಸದೇ, ಅದರ ಬಾಡಿಗೆ ಸಹ ಪಾವತಿಸದೇ ಪರಾರಿಯಾಗುತ್ತಿರುವುದು ಗಮನಕ್ಕೆ ಬಂದಿತು.
ಜನ ಸೇರಿದ್ದರಿಂದ ಬೆದರಿದ ವಿನೀತ್ ಕೃಷ್ಣ 112 ಪೊಲೀಸರಿಗೆ ಫೋನ್ ಮಾಡಿದರು. `ತನಗೆ ರಕ್ಷಣೆ ಕೊಡಿ’ ಎಂದು ಪೊಲೀಸರಲ್ಲಿ ಮನವಿ ಮಾಡಿದರು. ಪೊಲೀಸರು ಬಂದು ಪರಿಶೀಲಿಸಿದಾಗ ವಿನೀತ್ ಕೃಷ್ಣ ಹಲವು ಕಡೆ ವಂಚಿಸಿರುವುದು ಗಮನಕ್ಕೆ ಬಂದಿತು. ಬಸ್ಸಿನ ಸಿಬ್ಬಂದಿ ಸಹ ಹಣ ಪಾವತಿಸದೇ ಬಸ್ ಹತ್ತಿದ ಬಗ್ಗೆ ತಿಳಿಸಿದರು.
ವಸತಿಗೃಹಕ್ಕೆ 3200ರೂ ಹಾಗೂ ಬೈಕಿನ ಬಾಡಿಗೆ 7 ಸಾವಿರ ರೂ ಪಾವತಿಸುವಂತೆ ಸಂಬAಧಿಸಿದವರು ಪಟ್ಟುಹಿಡಿದರು. ಆಗ, ವಿನೀತ್ ಕೃಷ್ಣ ಶೇ 50ರಷ್ಟು ಹಣ ಪಾವತಿಸಿ, ಉಳಿದಿದನ್ನು `ನಾಳೆ ಆನ್ಲೈನ್ ಮೂಲಕ ಪಾವತಿಸುವೆ’ ಎಂದು ಭರವಸೆ ನೀಡಿದರು. ಆಗ, ಆನ್ಲೈನ್ ಮೂಲಕ ಪಾವತಿಸಿದ ಹಣ ಜಮಾ ಆಗದ ಬಗ್ಗೆ ಅನೇಕರು ದೂರಿದರು. `ಹಣ ಪಾವತಿಸುವವರೆಗೂ ಬಿಡುವುದಿಲ್ಲ’ ಎಂದು ಜನ ವಿನೀತ್ ಕೃಷ್ಣರಿಗೆ ಮುಂದೆ ಹೋಗಲು ಬಿಡಲಿಲ್ಲ.
ಕೊನೆಗೆ ಅನಿವಾರ್ಯವಾಗಿ ಪೂರ್ತಿ ಹಣ ಪಾವತಿಸಿ ವಿನೀತ್ ಕೃಷ್ಣ ಗೋಕರ್ಣದಿಂದ ತೆರಳಿದರು. ಬಸ್ ಸಿಬ್ಬಂದಿ ಸಹ ಹಣ ಪಾವತಿಸಿಕೊಂಡು ಅವರನ್ನು ಬೆಂಗಳೂರಿಗೆ ಕರೆದೊಯ್ದರು.