ಶಿರಸಿ: `ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಈ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವ ಮುನ್ನ ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
`ರಸ್ತೆ ಕಾಮಗಾರಿ ವೇಗ ಹೆಚ್ಚಿಸುವ ಹಿನ್ನಲೆಯಲ್ಲಿ ಸೆ 15ರಿಂದ ಮುಂದಿನ 6 ತಿಂಗಳದವಳಗೆ ರಸ್ತೆ ಸಾರ್ವಜನಿಕ ಸಂಚಾರ ಅವಕಾಶ ತಡೆಯ ಬಗ್ಗೆ ಗುತ್ತಿಗೆದಾರರು ಒತ್ತಡ ಹಾಕಿದ್ದಾರೆ. ಈ ಮಾರ್ಗ ಬಂದ್ ಮಾಡಿದಲ್ಲಿ ಶಿರಸಿ-ಕುಮಟಾ ನಿತ್ಯ ಓಡಾಡುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಜನರ ಅಭಿಪ್ರಾಯ ಸಂಗ್ರಹಿಸದೇ ಈ ರೀತಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ.
`ಈ ಹಿಂದೆ ದೇವಿಮನೆ ರಸ್ತೆ ಈಗಿನ ಅಳತೆಕ್ಕಿಂತ ಕಿರಿದಾಗಿತ್ತು. ಆಗ ಯಾವುದೇ ಸಂಚಾರ ಬಂದ್ ಮಾಡದೇ ರಸ್ತೆ ಅಭಿವೃದ್ಧಿ ಮಾಡಿದ್ದರು. ಅದನ್ನು ಸ್ಮರಿಸಿಕೊಂಡು ಈಗಿನ ಅಭಿವೃದ್ಧಿ ಕೆಲಸ ಮಾಡಬೇಕು’ ಎಂದವರು ಅಭಿಪ್ರಾಯಪಟ್ಟರು. ರಸ್ತೆಯ ಕಾಮಗಾರಿಯ ಕ್ಷೇತ್ರದ ಪರವಾನಿಗೆ, ಕೇಂದ್ರ ಪರಿಸರ ಮಂತ್ರಾಲಯದ ವಿಳಂಬ ನೀತಿ ಮತ್ತು ಖಾಸಗಿ ವ್ಯಕ್ತಿಗಳ ಭೂಸ್ವಾಧೀಕರಣ ಪ್ರಕ್ರಿಯೆ ಮಾಡಿಕೊಳ್ಳದೆ ಟೆಂಡರ್ ಮತ್ತು ಕಾಮಗಾರಿ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.