ಸಿದ್ದಾಪುರ: ಸಾಗರ ಹಾಗೂ ಶಿರಸಿಗೆ ಹೋಗುವ ಬಸ್ಸುಗಳಲ್ಲಿ ಸದಾ ಜನ ಜಂಗುಳಿ ಕಂಡು ಬರುತ್ತಿದ್ದು, ಬೆಳಗ್ಗಿನ ಅವಧಿಯಲ್ಲಿ ಶಾಲಾ-ಕಾಲೇಜಿಗೆ ಹೋಗುವವರು ಬಸ್ಸಿನಲ್ಲಿ ಜೋತಾಡುವುದು ಅನಿವಾರ್ಯ. ಹೆಚ್ಚುವರಿ ಬಸ್ಸು ಬಿಡುವಂತೆ ಬೇಡಿಕೆ ಸಲ್ಲಿಸಿದರೂ ಕೆಎಸ್ಆರ್ಟಿಸಿ ಈ ಬಗ್ಗೆ ಚಿಂತಿಸಿಲ್ಲ.
ಸಿದ್ದಾಪುರದಿoದ ನಿತ್ಯ ನೂರಾರು ವಿದ್ಯಾರ್ಥಿಗಳು ಶಿರಸಿಗೆ ಹೋಗುತ್ತಾರೆ. ಸಾಗರಕ್ಕೆ ಹೋಗುವ ಜನರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಮೊದಲನೆಯದಾಗಿ ಸಮಯಕ್ಕೆ ಸರಿಯಾಗಿ ಬಸ್ಸಿಲ್ಲ. ಜೊತೆಗೆ ಬಿಡುವ ಬಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಆಸನವಿಲ್ಲ. ಹೀಗಾಗಿ ಬಸ್ಸಿನ ಮೆಟ್ಟಿಲುಗಳ ಮೇಲೆ ಜೋತಾಡುತ್ತಲೇ ಮಕ್ಕಳು ಶಾಲೆ-ಕಾಲೇಜಿಗೆ ತೆರಳುತ್ತಿದ್ದಾರೆ.
ಸಿದ್ದಾಪುರದಿಂದ ಬೆಳಗ್ಗೆ 6ರಿಂದ 10ಗಂಟೆ ಅವಧಿಯಲ್ಲಿ ಸರಿಯಾದ ಬಸ್ ವ್ಯವಸ್ಥೆಗಳಿಲ್ಲ. ಅದಾದ ನಂತರ ಬಸ್ಸುಗಳಲ್ಲಿ ಕಾಲು ಹಾಕಲು ಜಾಗವಿಲ್ಲ. ಸಮಯಕ್ಕೆ ಸರಿಯಾಗಿ ಕಾಲೇಜು ಸೇರಬೇಕು ಎಂದಾದರೆ ಮಕ್ಕಳು ಸಿಗುವ ಬಸ್ಸಿಗೆ ಜೋತಾಡಲೇಬೇಕು ಎಂಬ ಪರಿಸ್ಥಿತಿಯಿದೆ. ಅದರಲ್ಲಿಯೂ ಆಗಾಗ ಹಾಳಾಗುವ ಬಸ್ಸುಗಳನ್ನೇ ಇಲ್ಲಿ ಓಡಿಸಲಾಗುತ್ತದೆ. ಆ ದಿನ ಕಾಲೇಜಿಗೂ ಹೋಗಲಾಗುವುದಿಲ್ಲ. ಮನೆ ಕೆಲಸವೂ ಸಾಗುವುದಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.