ಹೊನ್ನಾವರದ ಬಡಗಣಿ ನದಿ ಉಕ್ಕಿದ ಪರಿಣಾಮ ಕಳೆದ ನಾಲ್ಕು ದಿನದಿಂದ ನದಿ ಪಾತ್ರದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಅಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ.
ಹಳದಿಪುರ ಭಾಗದಲ್ಲಿ ಬಡಗಣಿಯಿಂದ ಸಾಲಿಕೇರಿಯವರೆಗೆ ಗದ್ದೆಗಳಲ್ಲಿ ಉಪ್ಪು ನೀರು ನುಗ್ಗಿದ ಪರಿಣಾಮವಾಗಿ ಶೇಂಗಾ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಇದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ. ಕೃಷಿ ಜಮೀನಿಗೆ ಉಪ್ಪು ನೀರು ನುಗ್ಗದಂತೆ ತಡೆಯಲು 50 ಲಕ್ಷ ರೂಪಾಯಿ ವೆಚ್ಚದಲ್ಲಿ 2022ರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದ್ದರು. ಚಿಕ್ಕ ನೀರಾವರಿ ಇಲಾಖೆ ತಡೆಗೋಡೆ ಕಾರ್ಯ ಪ್ರಾರಂಭಿಸಿ 3 ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ.
`ಅಪೂರ್ಣ ಹಾಗೂ ಕಳಪೆ ಕಾಮಗಾರಿಯಿಂದ ತಮ್ಮ ಬೆಳೆಗಳು ಹಾನಿಯಾಗಿದೆ. ಈಗಾಗಲೇ ತಡೆಗೋಡೆ ಹಲವು ಕಡೆ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ನೀರಿನ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಈ ಬಗ್ಗೆ ಚಿಕ್ಕ ನೀರಾವರಿ ಅಧಿಕಾರಿಗಳಿಗೆ ಸಾಕಷ್ಟು ಸಲ ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂಬುದು ರೈತರ ದೂರು.