ಶಿರಸಿಯ ದಿ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿನ ಅಕ್ರಮ-ಅವ್ಯವಹಾರ ಆರೋಪಗಳಿಗೆ ಸಂಬ0ಧಿಸಿ ಬೆಂಗಳೂರಿನ ಸಹಕಾರಿ ಸಂಘಗಳ ನಿಬಂಧಕರ ಕಚೇರಿಯೂ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರ ಕಚೇರಿಗೆ ಪತ್ರ ಬರೆದಿದೆ. `ಕಲಂ 64 ಅಡಿ ವಿಚಾರಣೆ ಅಗತ್ಯವಿದ್ದರೆ ಅಂಶವಾರು ಪಟ್ಟಿ ಸಿದ್ದಪಡಿಸಿ ಸಲ್ಲಿಸಿ’ ಎಂದು ಸಹಕಾರಿ ಸಂಘಗಳ ನಿಬಂಧಕರು ಸೂಚಿಸಿದ್ದಾರೆ.
ಅನಿಲಕುಮಾರ ಸಿದ್ದಪ್ಪ ಮುಷ್ಠಗಿ, ಮಹಾಭಲೇಶ್ವರ ಗಣಪತಿ ಹೆಗಡೆ, ಪ್ರವೀಣ ಮಹಾಭಲೇಶ್ವರ ಹೆಗಡೆ, ದೀಪಕ ರಾಜಾರಾಮ ಹೆಗಡೆ ಹಾಗೂ ಇತರರು ಟಿಎಸ್ಎಸ್ ವಿರುದ್ಧ ಫೆ 12ರಿಂದ ಫೆ 17ರ ಅವಧಿಯಲ್ಲಿ ಬೆಂಗಳೂರಿನ ಸಹಕಾರಿ ಸಂಘಗಳ ಅಪರ ನಿಬಂಧಕರಿಗೆ ದೂರು ಸಲ್ಲಿಸಿದ್ದರು. ಅನಿಲಕುಮಾರ ಸಿದ್ಧಪ್ಪ ಮುಷ್ಠಗಿ ಅವರ ಸಾಲದ ಖಾತೆ 10673ರಲ್ಲಿ ನಿಯಮಬಾಹಿರವಾಗಿ ತಿದ್ದುಪಡಿ ಮಾಡಿರುವ ಬಗ್ಗೆ ಅವರು ಆಕ್ಷೇಪಿಸಿದ್ದರು.
ದೀಪಕ ರಾಜಾರಾಮ ಹೆಗಡೆ ಹಾಗೂ ಇತರರು 2018-19 ಹಾಗೂ 2022-23ನೇ ಸಾಲುಗಳಲ್ಲಿ ನಡೆದ ಮರು ಲೆಕ್ಕಪರಿಶೋಧನಾ ವರದಿಯಲ್ಲಿ ಅನೇಕ ನ್ಯೂನತೆಗಳ ಬಗ್ಗೆ ವಿವರಿಸಿದ್ದರು. ದೊಡ್ಡ ಮೊತ್ತದ ಸಾಲಗಳ ಮನ್ನಾ ಹಾಗೂ ಹೊಂದಾಣಿಕೆ ಬಗ್ಗೆ ಕಲಂ 64ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು. ಮಹಾಭಲೇಶ್ವರ ಗಣಪತಿ ಹೆಗಡೆ ಅವರು ಸಾಲದ ಖಾತೆ ಸಂಖ್ಯೆ 5913ರಲ್ಲಿ ಬಾಕಿ ಇರುವ ಹಣದ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರವೀಣ ಮಹಾಭಲೇಶ್ವರ ಹೆಗಡೆ ಅವರು ಸಹ ಅವ್ಯವಹಾರದ ಆರೋಪ ಮಾಡಿ, ನ್ಯಾಯ ಒದಗಿಸುವಂತೆ ಪತ್ರ ಬರೆದಿದ್ದರು.
ಈ ನಾಲ್ಕು ಪ್ರಕರಣಗಳನ್ನು ಗಮನಿಸಿದ ಬೆಂಗಳೂರಿನ ಸಹಕಾರಿ ಸಂಘಗಳ ನಿಬಂಧಕರ ಕಚೇರಿ ಮುಂದಿನ ಕ್ರಮದ ಬಗ್ಗೆ ಸ್ಪಷ್ಠ ಅಭಿಪ್ರಾಯ ಸಲ್ಲಿಸುವಂತೆ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರ ಕಚೇರಿಗೆ ಸೂಚಿಸಿದೆ. ಅರ್ಜಿದಾರರ ಬೇಡಿಕೆಯಂತೆ ಕಲಂ 64 ಅಡಿ ವಿಚಾರಣೆ ಅಗತ್ಯವಿದ್ದರೆ ಆರೋಪವಾರು ಹಾಗೂ ಅಂಶವಾರು ಪಟ್ಟಿ ಸಿದ್ದಪಡಿಸಿ ಸಲ್ಲಿಸುವಂತೆಯೂ ಸೂಚಿಸಿದೆ.