ಶಿರಸಿಯ ಅಡಿಕೆ ವ್ಯಾಪಾರಿ ಹಾರಿಸ್ ಖಾನ್ ಅವರ ಅಡಿಕೆ ಗೋದಾಮಿನ ಬಾಗಿಲು ಒಡೆದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಾರಿಸ್ ಖಾನ್ ಅವರ ಒಡೆತನದಲ್ಲಿರುವ ಸಲಮಾತನಗರ ಕೆಳಗಿನಗುಡ್ಡದಮನೆಯ `ಅರ್ಕನೆಟ್ ಟೇಡರ್ಸ’ನಲ್ಲಿ 2024ರ ಡಿಸೆಂಬರ್ 24ರ ಅವಧಿಯಲ್ಲಿ ಎರಡು ಕ್ವಿಂಟಲ್ ಅಡಿಕೆ ಕಳ್ಳತನವಾಗಿತ್ತು. ಮಳಿಗೆಯ ಬಾಗಿಲು ಮುರಿದ ಕಳ್ಳರು ಅಡಿಕೆ ಅಪಹರಿಸಿದ್ದರು. ಡಿ 25ಕ್ಕೆ ಅವರು ಪೊಲೀಸ್ ದೂರು ನೀಡಿದ್ದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗಣೇಶ ಕೆ ಎಲ್ ಹಾಗೂ ಸಿಪಿಐ ಶಶಿಕಾಂತ ವರ್ಮ ಈ ಪ್ರಕರಣದ ಬಗ್ಗೆ ವಿಚಾರಿಸಿದ್ದರು. ಕಳ್ಳರ ಹುಡುಕಾಟ ನಡೆಸಿದ ಪಿಎಸ್ಐ ರಾಜಕುಮಾರ ಉಕ್ಕಲಿ ಹಾಗೂ ರತ್ನಾ ಕುರಿ ಅವರಿಗೆ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರಕರ್, ಅಶೋಕ ನಾಯ್ಕ, ಸಂದೀಪ ನಿಂಬಾಯಿ, ರಾಮಯ್ಯ, ಹನುಮಂತ, ರಾಕೇಶ, ಮೋಹನ ನೆರವು ನೀಡಿದರು.
ಶಿರಸಿ ಆರೆಕೊಪ್ಪ ಮೂಲದ ಖಾಲಿದ್ ಕನವಳ್ಳಿ ಮೇಲೆ ಮೊದಲು ಪೊಲೀಸರಿಗೆ ಅನುಮಾನ ಕಾಡಿತು. ಸದ್ಯ ಇಂದಿರಾನಗರದಲ್ಲಿ ವಾಸವಾಗಿರುವ ಖಾಲಿದ್ ಕನವಳ್ಳಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಶಿರಸಿಯ ಮುಬಾರಕ್ ಮೆಡಿಕಲ್ಸ್ ಹಿಂದೆ ವಾಸಿಸುವ ಇಕ್ಬಾಲ್ ಖಾನ್ ಹೆಸರು ಮುನ್ನೆಲೆಗೆ ಬಂದಿತು.
ತನಿಖೆ ತೀವೃಗೊಳಿಸಿದಾಗ ಈ ಇಬ್ಬರು ಸೇರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು. ಜೊತೆಗೆ ಕಳ್ಳತನ ಮಾಡಿದ್ದ 90 ಕೆಜಿ ಅಡಿಕೆ ಹಾಗೂ ಅವರ ಬಳಿಯಿದ್ದ 39600ರೂ ಹಣವನ್ನು ಪೊಲೀಸರಿಗೆ ಒಪ್ಪಿಸಿದರು. ಕಳ್ಳತನಕ್ಕೆ ಬಳಸಿದ ಸ್ಕೂಟಿಯನ್ನು ಪೊಲೀಸರು ವಶಕ್ಕೆಪಡೆದರು.