ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಶಾಸಕರು – ಸಚಿವರನ್ನು ಎದುರು ಹಾಕಿಕೊಂಡು ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ಉಜ್ವಲಕುಮಾರ ಘೋಷ್ ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ!
ಮಾರುವೇಷಗಳಲ್ಲಿ ಅಬಕಾರಿ ಠಾಣೆಗಳಿಗೆ ತೆರಳಿ ಅಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಮೂಲಕ ಅವರು ಖಡಕ್ ಜಿಲ್ಲಾಧಿಕಾರಿ ಎಂದು ಹೆಸರು ಪಡೆದಿದ್ದರು. ರಾತ್ರಿ ಅವಧಿಯಲ್ಲಿ ಸಹ ಎಲ್ಲೆಂದರಲ್ಲಿ ದಾಳಿ ನಡೆಸಿ ರಿಯಾಲಿಟಿ ಚೆಕ್ ನಡೆಸುತ್ತಿದ್ದರು. ನಗರಸಭೆ ಸೇರಿ ಹಲವು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅಧಿಕಾರಿಗಳಿಗೆ ಈ ಅಧಿಕಾರಿ ಬೆಂಡೆತ್ತಿದ್ದರು. ಇದೆಲ್ಲವನ್ನು ಸಹಸದೇ ಉಜ್ವಲಕುಮಾರ್ ಘೋಷ್ ವಿರುದ್ಧ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದರೂ ಆ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಉಜ್ವಲಕುಮಾರ ಘೋಷ್ ಅವರ ವರ್ಗಾವಣೆಗೆ ಆಗ್ರಹಿಸಿ ಶಾಸಕರು ಧರಣಿ ಕುಳಿತಾಗ ಕಾರವಾರದಲ್ಲಿ ಸಾವಿರಾರು ಜನ `ಇದೇ ಜಿಲ್ಲಾಧಿಕಾರಿ ಬೇಕು’ ಎಂದು ಪ್ರತಿಭಟಿಸಿದ್ದರು.
ಪಹರೆ ವೇದಿಕೆಯ ಸ್ವಚ್ಛತಾ ಆಂದೋಲನಕ್ಕೆ ಉಜ್ವಲಕುಮಾರ ಘೋಷ್ ಚಾಲನೆ ನೀಡಿದ್ದರು. ಅದಾದ ನಂತರ ಅವರು ಸಹ ಸಾಕಷ್ಟು ಬಾರಿ ಬೀದಿಗಿಳಿದು ಕಸ ಗುಡಿಸಿದ್ದರು. ಅವರು ಚಾಲನೆ ನೀಡಿದ ಸ್ವಚ್ಛತಾ ಆಂದೋಲನ ಜನವರಿ 3ರಂದು 10 ವರ್ಷ ಪೂರೈಸಿದ್ದು, ಆ ಸಡಗರಕ್ಕೆ ಸಾಕ್ಷಿಯಾಗುವುದಾಗಿ ಉಜ್ವಲಕುಮಾರ ಘೋಷ್ ಹೇಳಿದ್ದಾರೆ. ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರನ್ನು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಭೇಟಿಯಾಗಿ ನಿರಂತರ ಸ್ವಚ್ಛತೆ ಮುಂದುರೆದ ಬಗ್ಗೆ ತಿಳಿಸಿದ್ದು, ಇದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಪಹರೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಭರವಸೆ ನೀಡಿದರು.