ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇದರೊಂದಿಗೆ ಭೂ ಕುಸಿತ ಸಹ ನಿಂತಿಲ್ಲ.
ಮoಗಳವಾರ ಭೂ ಕುಸಿತ ಆದ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಜೊತೆ ಮತ್ತೆ ಮಣ್ಣು ಕುಸಿಯುತ್ತಿರುವುದು ಸಮಸ್ಯೆಯಾಗಿದೆ. ಮಂಗಳವಾರ ಬೆಳಗ್ಗೆ ವಿವಿದ ಕಡೆ ರಸ್ತೆಯ ಮೇಲೆ ಭೂ ಕುಸಿತ ಉಂಟಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆ ಮಣ್ಣು ತೆಗೆದು ಸಂಚಾರಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಆದರೆ, ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸಿದರೂ ವಾಹನಗಳ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಣ್ಣು ತೆಗೆಯಲು ಸಾಧ್ಯವಾಗಿಲ್ಲ.
ಅಂಕೋಲಾ ತಾಲೂಕಿನ ಶೀರೂರಿನಲ್ಲಿ ಕುಸಿತ ಗುಡ್ಡದ ಮಣ್ಣನ್ನು ಬೇರೆ ಕಡೆ ಸಾಗಿಸುವ ಕೆಲಸ ಮುಂದುವರೆದಿದೆ. ಈ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗಬಾರದು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕರ ಓಡಾಟವನ್ನು ನಿಷೇಧಿಸಲಾಗಿದೆ. ಎನ್ ಡಿ ಆರ್ ಎಫ್ ತಂಡದವರು ಸಹ ಇಲ್ಲಿಯೇ ಬೀಡು ಬಿಟ್ಟಿದ್ದು, ಹಗಲಿರುಳು ಶ್ರಮಿಸುತ್ತಿದ್ದಾರೆ. ಗುಡ್ಡ ಕುಸಿತದ ಪರಿಣಾಮ ನದಿಗೆ ಬಿದ್ದ ಟ್ಯಾಂಕರ್ ಸಹ ನೀರಿನಲ್ಲಿ ತೇಲುತ್ತಿದೆ. ಹೀಗಾಗಿ ಅಪಾಯದ ಮುನ್ಸೂಚನೆ ಹಿನ್ನಲೆ ಯಾರೂ ಆ ಭಾಗಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ.
ಇನ್ನೂ ಕುಮಟಾ ಶಿರಸಿ ರಸ್ತೆಯಲ್ಲಿ ಸಹ ಎರಡು ಕಡೆ ಮಂಗಳವಾರ ಗುಡ್ಡ ಕುಸಿತ ಉಂಟಾಗಿದ್ದು, ಅದು ಸಹ ತೆರವು ಆಗಿಲ್ಲ. ಅಲ್ಲಿಯೂ ಮಂಗಳವಾರ ಬೆಳಗ್ಗೆಯಿಂದಲೇ ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯರು ಸೇರಿ ಮಣ್ಣು ತೆರವು ಮಾಡುವ ಕೆಲಸ ಮಾಡುತ್ತಿದ್ದಾರೆ. ವ್ಯಾಪಕ ಮಳೆ ಸುರಿದ ಕಾರಣ ನಿರೀಕ್ಷೆಯಂತೆ ಕಾರ್ಯಾಚರಣೆ ಸಾಗಿಲ್ಲ.
Discussion about this post