ಮೇಲಧಿಕಾರಿಗಳು ಸೂಚಿಸಿದ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬೆನಕ ಆರ್ ನಾಯಕ ಅವರು ಅಮಾನತಾಗಿದ್ದಾರೆ. ಯಲ್ಲಾಪುರ ಗಡಿಭಾಗವಾದ ಕಿರವತ್ತಿ ತಪಾಸಣಾ ಕೇಂದ್ರದಲ್ಲಿನ ಕರ್ತವ್ಯ ಲೋಪದ ಕಾರಣ ಅವರನ್ನು ಅಮಾನತುಗೊಳಿಸಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ.
ಮಾರ್ಚ 6ರ ರಾತ್ರಿ ಯಲ್ಲಾಪುರದ ಅರಬೈಲ್’ನಿಂದ ಕಿರವತ್ತಿಯವರೆಗಿನ ಹೆದ್ದಾರಿ ಅಂಚಿನ ಚಹಾ ಅಂಗಡಿಗಳು ತೆರೆದಿರುವ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಮಾಹಿತಿ ಬಂದಿತ್ತು. ಹೆದ್ದಾರಿಯ ಎರಡು ಬದಿ ಲಾರಿಗಳು ನಿಂತಿರುವುದರಿoದ ವಾಹನ ದಟ್ಟಣೆ ಸಮಸ್ಯೆಯಾಗುವ ಬಗ್ಗೆ ಅರಿತ ಅವರು ತಪಾಸಣೆಗಾಗಿ ಸಿದ್ದಾಪುರದ ಸಿಪಿಐ ಜೆ ಬಿ ಸೀತಾರಾಮ ಅವರನ್ನು ತಪಾಸಣೆಗೆ ಕಳುಹಿಸಿದ್ದರು.
ಕಿರವತ್ತಿಯವರೆಗೂ ತೆರಳಿ ಅಲ್ಲಿನ ತಪಾಸಣಾ ಕೇಂದ್ರವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಂ ನಾರಾಯಣ ಅವರು ಸೂಚಿಸಿದ್ದರು. ಶಿರಸಿ ಉಪ ವಿಭಾಗದ ಗಸ್ತು ಕರ್ತವ್ಯದ ಮೇಲಾಧಿಕಾರಿಯಾಗಿರುವ ಸಿಪಿಐ ಜೆ ಬಿ ಸೀತಾರಾಮ ಅವರು ಮಾರ್ಚ 6ರ ಸಂಜೆ ಯಲ್ಲಾಪುರಕ್ಕೆ ಆಗಮಿಸಿದರು. ರಾತ್ರಿಯಿಡಿ ಗಸ್ತು ತಿರುಗಿದ ಅವರು ಎಚ್ ಆರ್ ಪಿ ವಾಹನ ಸಂಚಾರವಿಲ್ಲದಿರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾರ್ಚ 7ರ ನಸುಕಿನ 4.30ಕ್ಕೆ ಯಲ್ಲಾಪುರ ಪಟ್ಟಣದಲ್ಲಿ ಸಂಚರಿಸಿ, ನಂತರ ಕಿರವತ್ತಿ ತಪಾಸಣಾ ಕೇಂದ್ರಕ್ಕೆ ಸಿಪಿಐ ಜೆ ಬಿ ಸೀತಾರಾಮ ಭೇಟಿ ನೀಡಿದರು. ಆದರೆ, ಆ ತಪಾಸಣಾ ಕೇಂದ್ರದಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ಕಾಣಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬೆನಕಾ ಆರ್ ನಾಯಕ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವುದು ಗೊತ್ತಾಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.
ನಿಯೋಜಿಸಿದ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರದ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಸಿಪಿಐ ಜೆ ಬಿ ಸೀತಾರಾಮ ವರದಿ ಸಲ್ಲಿಸಿದರು. ಆ ವರದಿ ಹಿನ್ನಲೆ ಬೆನಕಾ ಆರ್ ನಾಯಕ ಅವರನ್ನು ಅಮಾನತು ಮಾಡಿ ಎಂ ನಾರಾಯಣ ಅವರು ಆದೇಶ ಹೊರಡಿಸಿದರು.