ಶಿರಸಿಯ ಉಂಚಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಹೆಗಡೆ ಕಬ್ಬೆ ಹಾಗೂ ಗುರುನಾಥ ಹೆಗಡೆ ಸೇರಿ ಕೆಲ ಸದಸ್ಯರ ವಿರುದ್ಧ ನ್ಯಾಯಾಲಯ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಹೀಗಾಗಿ ಬುಧವಾರ ಒಟ್ಟು 16 ಜನರ ವಿರುದ್ಧ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಕ್ರಮ-ಅವ್ಯವಹಾರದ ತನಿಖೆ ಶುರು ಮಾಡಿದ್ದಾರೆ.
`ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ’ ಎಂಬುದು ದೂರುದಾರ ರವಿತೇಜ ಕೃಷ್ಣ ರೆಡ್ಡಿ ಅವರ ಅರೋಪ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತರು ಹಣಕಾಸು ಅವ್ಯವಹಾರ ನಡೆಸಿದ್ದಾರೆ. ಮೋಸ, ವಂಚನೆ ಹಾಗೂ ಸರ್ಕಾರಿ ಹಣ ದುರುಪಯೋಗದಿಂದ ಸಂಘಕ್ಕೂ ನಷ್ಟವಾಗಿದೆ. ಈ ಹಗರಣದಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಕಾಯ್ದೆ-ಕಾನೂನು ಉಲ್ಲಂಘಿಸಿ ಅವ್ಯವಹಾರ ನಡೆಸಲಾಗಿದೆ’ ಎಂಬುದರ ಬಗ್ಗೆ ರವಿತೇಜ ಕೃಷ್ಣ ರೆಡ್ಡಿ ಪೊಲೀಸರಲ್ಲಿ ದೂರಿದ್ದಾರೆ.
`ಸಂಘದಲ್ಲಿ ಕಾಗದಪತ್ರಗಳ ತಿದ್ದುವಿಕೆ ಹಾಗೂ ಕೆಲ ದಾಖಲೆಗಳನ್ನು ಸೃಷ್ಠಿಸುವ ಮೂಲಕ ಅಪರಾತಪರ ನಡೆಸಲಾಗಿದೆ. ಅಧ್ಯಕ್ಷರು ಹಾಗೂ ಇನ್ನಿತರರು ಅಧಿಕಾರ ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಸ್ವರೂಪದ ಆರ್ಥಿಕ ಅಪರಾಧ ನಡೆಸಿದ್ದಾರೆ’ ಎಂದವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಈ ಹಿನ್ನಲೆ ಉಂಚಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಹೆಗಡೆ ಕಬ್ಬೆ, ಉಪಾಧ್ಯಕ್ಷ ನಾಗರಾಜ ಗಣಪತಿ ಹೆಗಡೆ ಉಂಬಳೇಕೊಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುನಾಥ ಶಂಕರ ಹೆಗಡೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಇದರೊಂದಿಗೆ ನಿರ್ದೇಶಕರಾದ ರಾಮಾ ಬಂಗಾರ್ಯ ನಾಯ್ಕ, ಬಂಗಾರ್ಯ ಅಜ್ಜಯ್ಯ ತೋಪಿನಮಠ ಕಲ್ಲಿ, ಮಾದೇವ ಭೀಮಾ ನಾಯ್ಕ ಕೋಗೋಡ, ವಿಠ್ಠಲ ರಾಮಾ ನಾಯ್ಕ ಸೋಮನಳ್ಳಿ, ಶಂಕರ ನಾರಾಯಣ ಬೈಲೂರು ಕೆರೆಕೊಪ್ಪ, ಮಾದೇವ ರಾಮ ಗೌಡ ಕಬ್ಬೆ, ಅಣ್ಣಪ್ಪ ಮಲ್ಯ ಜೋಗಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಲಗಾರರಾದ ಪ್ರವೀಣ ಮಾಬ್ಲೇಶ್ವರ ಹೆಗಡೆ, ನಾಸಿಮಾ ಮಹಮ್ಮದ ಶಫಿ, ಸುಶ್ಮಾ ನಿಲೇಶ ಲೋಖಂಡೆ, ಮೋಹನ ಗುತ್ಯಾ ಜೋಗಳೇಕರ, ಕಾನಕೊಪ್ಪ, ಕಮಲಾ ಬೊಮ್ಮಾ ನಾಯ್ಕ ಉಂಚಳ್ಳಿ ಹಾಗೂ ಯಮುನಾ ಪುಂಡಲೀಕ ನಾಯ್ಕ ಉಪಳೇಕೊಪ್ಪ ಅವರು ಮಿತಿ ಮೀರಿ ಸಾಲಪಡೆದ ಕಾರಣ ಅವರು ವಿಚಾರಣೆ ಎದುರಿಸಬೇಕಿದೆ.