ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಅಸಮಧಾನ ವ್ಯಕ್ತಪಡಿಸಿದೆ.
ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಫೆ 10ರಂದು ರೈತ ಸಂಘದವರು ವಿಧಾನಸೌಧದ ಎದುರು ಪ್ರತಿಭಟಿಸಲಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ವ್ಯಾಪ್ತಿಗೆ ಒಳಪಡದ ವಿಷಯದಲ್ಲಿ ಸಹ ಅನಗತ್ಯವಾಗಿ ಕೈ ಆಡಿಸುತ್ತಿದ್ದಾರೆ. ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಶಾಂತರಾಮ ನಾಯ್ಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ಅರಣ್ಯ ಭೂಮಿ ಮಂಜೂರಿ ಕಾಯ್ದೆ ಪ್ರಕಾರ ನಡೆಯುತ್ತದೆ. ಅದನ್ನು ಬದಲಾವಣೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಆದರೆ, ರಾಜ್ಯ ಸರ್ಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಟಿಪ್ಪಣಿ ಹೊರಡಿಸಿ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಶಾಂತರಾಮ ನಾಯ್ಕ ಅಸಮಧಾನ ಹೊರಹಾಕಿದರು.
`ಅರಣ್ಯ ಕಾಯ್ದೆಯಲ್ಲಿ 3 ಹೆಕ್ಟೇರ್ ಭೂಮಿ ಮಂಜೂರಿಗೆ ಅವಕಾಶವಿದೆ. ಅದಕ್ಕೆ ಮಿತಿ ಹೇರುವ ಅಧಿಕಾರವೂ ರಾಜ್ಯ ಸರ್ಕಾರಕ್ಕಿಲ್ಲ. ಅರಣ್ಯ ಕಾಯ್ದೆಯ ತಲೆಬುಡ ಅರಿವಿಲ್ಲದೇ ಅರಣ್ಯ ಸಚಿವರು ಟಿಪ್ಪಣಿ ಹೊರಡಿಸುತ್ತಿದ್ದು, ಅರಣ್ಯ ಕಾಯ್ದೆ ಅರಣ್ಯವಾಸಿಗಳ ಪರವಾಗಿದ್ದರೂ ಈ ಅರಣ್ಯ ಸಚಿವರಿಂದ ಈವರೆಗೆ ಒಬ್ಬರಿಗೂ ಹಕ್ಕುಪತ್ರ ಕೊಡಲು ಸಾಧ್ಯವಾಗಿಲ್ಲ’ ಎಂದು ಕಿಡಿಕಾರಿದರು.
`ಸರ್ಕಾರದ ತಪ್ಪು ಆದೇಶದಿಂದ ಉಪವಿಭಾಗಾಧಿಕಾರಿ ಅರ್ಜಿ ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಗಳಿಲ್ಲದ ಸಮಿತಿಯಿಂದ ಅರ್ಜಿ ಪರಿಶೀಲನೆ ನಡೆಸುವುದನ್ನು ಕೂಡಲೇ ತಡೆಯಬೇಕು’ ಎಂದು ಒತ್ತಾಯಿಸಿದರು.