ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊoಡ ನಂತರ ಅಸಮರ್ಪಕ ಕಾಮಗಾರಿಯಿಂದ 260ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದಾಗಿಯೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿವಹಿಕೊಂಡಿರುವ ಕಂಪನಿಯವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಕಾಮಗಾರಿಯನ್ನು ಸಹ ಪೂರ್ಣಗೊಳಿಸಿಲ್ಲ.
ಈ ಬಗ್ಗೆ ಸೋಮವಾರ ಸ್ವತ: ಸಚಿವ ಮಂಕಾಳು ವೈದ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಕಾಮಗಾರಿ ಗುತ್ತಿಗೆಪಡೆದ ಕಂಪನಿಯವ ನಿರ್ಲಕ್ಷ ಧೋರಣೆಯಿಂದಾಗಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಿದವರಿಲ್ಲ. ಸೌಜನ್ಯಕ್ಕೂ ಕಂಪನಿಯವರು ಪರಿಹಾರ ವಿತರಿಸುತ್ತಿಲ್ಲ. ಜಿಲ್ಲಾಡಳಿತದಿಂದ ಅನುಮತಿ ಪಡೆಯದೇ ಕೆಲ ಕಡೆ ರಸ್ತೆ ಓಡಾಟ ನಿರ್ಬಂಧ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಕಂಪನಿಗೆ ನೀಡಿದ ಅನುಮತಿಗಳನ್ನು ರದ್ಧುಪಡಿಸಬೇಕು’ ಎಂದು ಮಂಕಾಳು ವೈದ್ಯ ಸೂಚನೆ ನೀಡಿದ್ದಾರೆ.
`ಜಿಲ್ಲಾ ವೈದ್ಯಕೀಯ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಆಸ್ಪತ್ರೆಗೆ ಆಂಬುಲೆನ್ಸ್ ಸಂಚಾರಕ್ಕೆ ಅನುಕೂಲ ಆಗುವಂತೆ ನೇರ ರಸ್ತೆ ಸಂಪರ್ಕ ಕಲ್ಪಿಸುವಂತೆ ಮತ್ತು ಎಲ್ಲಾ ಆಂಬುಲೆನ್ಸ್ಗಳು ಸುಸ್ಥಿತಿಯಲ್ಲೂರುವಂತೆ ನೋಡಿಕೊಳ್ಳಬೇಕು’ ಎಂದವರು ಸೂಚಿಸಿದ್ದಾರೆ. `ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ಫಲಕ ಅಳವಡಿಸಿತ್ತಿಲ್ಲ. ಕಾಮಗಾರಿ ಆರಂಭದ ಬಗ್ಗೆ ಶಾಸಕರಿಗೂ ಮಾಹಿತಿ ನೀಡುತ್ತಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು. `ಕಾಮಗಾರಿ ಆರಂಭ ಹಾಗೂ ಅಂತ್ಯದ ಬಗ್ಗೆ ಶಾಸಕರು ಹಾಗೂ ಮಾಧ್ಯಮಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
ಭಟ್ಕಳದಿಂದ ಕಾರವಾರದ ಗಡಿ ಭಾಗದವರೆಗೆ ನಡೆದಿರುವ ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತು 10 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.