ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಗೆ ಬೀರಣ್ಣ ನಾಯಕ ಮೊಗಟಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಾಕಷ್ಟು ಓಡಾಟ ನಡೆಸಿದ್ದಾರೆ. ಪ್ರವಾಸೋದ್ಯಮದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅವರು ರೂಪರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಪ್ರವಾಸೋದ್ಯಮ ಅಧ್ಯಯನ ವಿಷಯವಾಗಿ ಅವರು ವರದಿ ಸಿದ್ದಪಡಿಸಿದ್ದು, ಶೀಘ್ರದಲ್ಲಿಯೇ ಅದನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಕರಾವಳಿ, ಮಲೆನಾಡು ಹಾಗೂ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಸದಸ್ಯರೆಲ್ಲರೂ ಸೇರಿ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಕ್ರೂಡೀಕೃತ ವರದಿಯನ್ನು ಸಲ್ಲಿಸಲಾಗುತ್ತದೆ’ ಎಂದು ಬೀರಣ್ಣ ನಾಯಕ ಮೊಗಟಾ ಅವರು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ ಕೆ ವಿ ಅವರಿಗೆ ಆಶ್ವಾಸನೆ ನೀಡಿದ್ದಾರೆ. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪ್ರವಾಸೋದ್ಯಮ ಸಭೆ ನಡೆದಿದ್ದು, ಇಲ್ಲಿಯೂ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಧಿಕ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ಪ್ರದೇಶಗಳ ವೈಶಿಷ್ಟತೆಗಳು ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳ ಕುರಿತು ಸಮಿತಿ ಅಧ್ಯಯನ ನಡೆಸುತ್ತಿದೆ. ಜಿಲ್ಲೆಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ, ಅರಣ್ಯ ಟೂರಿಸಂ, ರೈನ್ ಟೂರಿಸಂ, ರಾಕ್ ಟೂರಿಸಂ, ಹಿಲ್ ಟೂರಿಸಂ ಮಾಡಲು ಸಾಕಷ್ಟು ಅವಕಾಶಗಳಿರುವ ಬಗ್ಗೆ ಸರ್ಕಾರಕ್ಕೂ ಮನವರಿಕೆಯಾಗಿದೆ. ಪರಿಸರ, ಅರಣ್ಯ ಪ್ರದೇಶಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಉತ್ತರ ಕನ್ನಡ ಜಿಲ್ಲಾಡಳಿತವೂ ಸಿದ್ಧವಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಮಿತಿಯ ಅಧ್ಯಯನ ವರದಿ ಮುಖ್ಯ ಪಾತ್ರ ನಿಭಾಯಿಸಲಿದೆ.
ಎಲ್ಲವೂ ಅಂದುಕೊoಡoತೆ ನಡೆದರೆ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸಂದರ್ಶಿಸುವ ನಿಟ್ಟಿನಲ್ಲಿ ವಿವಿಧ ನಗರಗಳಿಂದ ಜಿಲ್ಲೆಗೆ ಐಷಾರಾಮಿ ಬಸ್ಸುಗಳು ಬರಲಿದೆ. ಕನಿಷ್ಟ 2 ದಿನ ಜಿಲ್ಲೆಯ ಎಲ್ಲಾ ಕಡೆ ಸಂಚರಿಸುವ ಪ್ರವಾಸಿ ಪ್ಯಾಕೇಜ್’ನ್ನು ಮಾಡಲು ಪ್ರ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿರ್ಧರಿಸಿದೆ. ಬಂಡವಾಳ ಹೂಡಿಕೆದಾರರನ್ನು ಸಹ ಜಿಲ್ಲೆಗೆ ಕರೆಯಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ ಕೆ ವಿ ಮಾತನಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ ಜಿಲ್ಲೆಯ ಪ್ರವಾಸೋದ್ಯಮ ಭಾಗೀದಾರರಿಗೆ ಸದಾ ಸಹಕಾರ ಕೊಡುವೆ’ ಎಂದು ಅವರು ಹೇಳಿದ್ದಾರೆ.
`ದಾಂಡೇಲಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ ಭಾಗದಲ್ಲಿನ ಸೂಚನಾ ಫಲಕಗಳಲ್ಲಿ ಕನ್ನಡದ ಜೊತೆಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬರೆಸಬೇಕು. ಅನಧಿಕೃತ ಹೋಂ ಸ್ಟೇಗಳನ್ನು ತಡೆಯಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಅರಣ್ಯದಲ್ಲಿ ಪಾರ್ಟಿ ಮಾಡುವುದನ್ನು ತಡೆಯಬೇಕು. ಪ್ರವಾಸಿ ಮಾಹಿತಿ ಕೇಂದ್ರವನ್ನು ನಗರದ ಕೇಂದ್ರ ಭಾಗದಲ್ಲಿ ಆರಂಭಿಸಬೇಕು. ಸೈಕ್ಸ್ ಪಾಯಿಂಟ್ ಪ್ರವೇಶಕ್ಕೆ ಅನುಮತಿ ನೀಡಬೇಕು. ದೂಧ್ ಸಾಗರ್ಗೆ ರಾಜ್ಯದ ಕಡೆಯಿಂದ ಪ್ರವೇಶ ನೀಡಬೇಕು. ಇಲ್ಲಿ 300 ಕ್ಕೂ ಅಧಿಕವಿರುವ ವಿಶಿಷ್ಠ ಪ್ರಭೇದದ ಪಕ್ಷಿಗಳ ಕುರಿತ ಸರ್ವೆ ಮಾಡಬೇಕು. ಜಿಲ್ಲೆಯ ಕರಾವಳಿ ತೀರಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರು ಮತ್ತು ಗೈಡ್ಗಳ ನೇಮಕ ಮಾಡಬೇಕು. ಸಿ.ಆರ್.ಝಡ್ ಮತ್ತು ಅರಣ್ಯ ನಿಯಮಗಳಲ್ಲಿ ರಿಯಾಯತಿ ನೀಡಬೇಕು’ ಎಂದು ಪ್ರವಾಸೋದ್ಯಮಿಗಳು ಈ ವೇಳೆ ಒತ್ತಾಯಿಸಿದ್ದಾರೆ. `ಮೇ ಮಾಸದಲ್ಲಿ ಪ್ರವಾಸೋದ್ಯಮಿಗಳಿಗೆ ಕುಮಟಾದಲ್ಲಿ ಕಾರ್ಯಾಗಾರ ನಡೆಸಲಾಗುತ್ತದೆ’ ಎಂದು ರಾಜೇಂದ್ರ ಕೆ ವಿ ಈ ಸಭೆಯಲ್ಲಿ ಘೋಷಿಸಿದರು.
`ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮೊದಲು ಶಿಸ್ತು ತರಬೇಕಿದೆ. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕಿದೆ’ ಎಂದು ಸಮಿತಿಯ ಸದಸ್ಯರೂ ಆಗಿರುವ ಹಿರಿಯ ಪತ್ರಕರ್ತ ಜಿ ಯು ಭಟ್ ಹೊನ್ನಾವರ ಅನಿಸಿಕೆವ್ಯಕ್ತಪಡಿಸಿದ್ದಾರೆ. `ಹೊನ್ನಾವರದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಇಲ್ಲಿ ಸರ್ಕಿಟ್ ಟೂರಿಸಂ ಮಾಡಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ. `ಇಲಾಖೆ ಇಲಾಖೆಗಳ ನಡುವೆ ಸಮನ್ವಯತೆಯಿರಬೇಕು’ ಎಂದು ಜಿ ಯು ಭಟ್ಟ ಹೊನ್ನಾವರ ಅವರು ಒತ್ತಾಯಿಸಿದ್ದಾರೆ. ಈ ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಚೈತ್ರಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ನಾವಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸದಸ್ಯರಾದ ಎಸ್ ಜಿ.ಹೆಗಡೆ ಬೆದೇಕಲ್, ಮಹೇಶ್ ಗೋಳಿಹಟ್ಟಿ, ತಾಂಡೋರಾಯನ್ ಜಿ ಎಂ, ಶೈಲಜಾ ಗೊರನಮನೆ, ವೇಣುಗೋಪಾಲ ಮದ್ಗುಣಿ, ಯಾಸ್ಮಿನ್ ಕಿತ್ತೂರ ಇದ್ದರು.