ಸಿದ್ದಾಪುರ: ಡಿಸೆಂಬರ್ 20 ರಿಂದ 22 ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು `ಕದಂಬರ ಆರಾಧ್ಯ ದೇವರಾದ ಭುವನೇಶ್ವರಿ ಪುಣ್ಯ ಕ್ಷೇತ್ರವಾದ ಜಿಲ್ಲೆಯಿಂದ ಪ್ರಾರಂಭವಾಗುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ 31 ಜಿಲ್ಲೆ ಸೇರಿದಂತೆ 6 ಬೇರೆ ಬೇರೆ ರಾಜ್ಯದ ಗಡಿ ಪ್ರದೇಶದಲ್ಲಿ ಸಂಚರಿಸಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ತಲುಪಲಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಮಾತನಾಡಿ `ಐತಿಹಾಸಿಕ ಸ್ಥಳವಾಗಿರುವ ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯದಲ್ಲಿ ಎರಡನೇ ಬಾರಿಗೆ ಕನ್ನಡ ಜ್ಯೋತಿ ರಥಕ್ಕೆ ಉದ್ಘಾಟಿಸಲಾಗಿದೆ. ಕನ್ನಡದ ಆಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕರುನಾಡಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾತೃ ಭಾಷೆ ಬೇರೆಯಾಗಿದ್ದರೂ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಗಾಧವಾಗಿದೆ’ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ `ಕನ್ನಡ ನಾಡಿನ ಮಹಿಮೆ, ಪ್ರೀತಿ ವಿಶ್ವಾಸವನ್ನು ಹೊಂದಿರುವ ಕನ್ನಡಿಗರು ಹೊರ ರಾಜ್ಯದ ಯಾರೇ ಬಂದರೂ ಕನ್ನಡ ಮಾತನಾಡಲು ಕಲಿಯಬೇಕು’ ಎಂದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ `ಜಿಲ್ಲೆಯಲ್ಲಿ 4 ದಿನಗಳ ಕಾಲ ನಡೆಯುವ ರಥಯಾತ್ರೆ ಯಶಸ್ವಿಗೊಳಿಸಲು ಜಿಲ್ಲಾಡಳಿತದ ವತಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಕಡಲ ತೀರದಲ್ಲಿ ಪ್ಲಾಸ್ಟಿಕ್ ರಾಶಿ
ಕುಮಟಾ: ಸೇವಾಭಾರತಿ ರಜತಮಹೋತ್ಸವದ ಪ್ರಯುಕ್ತ ಸೇವಾಭಾರತಿ ಸದಸ್ಯರು ಧಾರೇಶ್ವರದ ಕಡಲ ಕಿನಾರೆಯನ್ನು ರವಿವಾರ ಸ್ವಚ್ಛಗೊಳಿಸಿದರು.
ದೇವಗಿರಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ವೀಣಾ ದುರ್ಗೇಕರ್, ಉಪಾಧ್ಯಕ್ಷ ಎಸ್.ಟಿ.ನಾಯ್ಕ ಹಾಗೂ ಪಂಚಾಯತದ ಸದಸ್ಯರಾದ ನಾಗೇಶ ನಾಯ್ಕ, ಪಾಂಡುರ0ಗ ಪಟಗಾರ, ದೇವೆಂದ್ರ ಶೇರುಗಾರ, ದಿನಕರ ಭಮಡಾರಿ, ಸವಿತಾ ಮುಕ್ರಿ, ಪಿಡಿಓ ವಿನಯಕುಮಾರ ಇತರರು ಇದ್ದರು. ಅಂದಾಜು 50 ಮೂಟೆ ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿದೆ.
ಆರೋಗ್ಯ ಸಹಾಯಕರ ಉಚಿತ ಕೌಶಲ್ಯ ತರಬೇತಿ
ಶಿರಸಿ: ಗ್ರೀನ್ ಕೇರ್ ಸಂಸ್ಥೆಯು ತನ್ನ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಮಹಾಲಕ್ಷ್ಮಿ ಮೆಮೊರಿಯಲ್ ಆಸ್ಪತ್ರೆ ಇವರ ಸಹಯೋಗದಲ್ಲಿ 180 ದಿನಗಳ ಆರೋಗ್ಯ ಸಹಾಯಕರ ಉಚಿತ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಸಂಸ್ಥೆಯು ಈಗಾಗಲೇ ಯಲ್ಲಾಪುರ ತಾಲೂಕಿನಲ್ಲಿ 80 ಯುವತಿಯರಿಗೆ ಟೈಲರಿಂಗ್ ಮತ್ತು ಬ್ಯೂಟಿಶಿಯನ್ ತರಬೇತಿ ಹಾಗೂ ಶಿರಸಿಯಲ್ಲಿ ಬಿ.ಕಾಂ ಪದವೀಧರರಿಗೆ ಅಕೌಂಟ್ ಅಸಿಸ್ಟಂಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಇದೀಗ ಹೆಚ್ಚು ಉದ್ಯೋಗವಕಾಶವಿರುವ ಆರೋಗ್ಯ ಸಹಾಯಕರ ಕೌಶಲ್ಯ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ. ತರಬೇತಿಯಲ್ಲಿ ನುರಿತ ವೈದ್ಯರು, ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ಆಧಾರಿತ ತರಬೇತಿ ನೀಡಿ ವಿವಿಧ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕನಿಷ್ಠ 10ನೇ ತರಗತಿ ಪೂರೈಸಿರುವ ಯುವಕ ಯುವತಿಯರು ತಮ್ಮ ಸ್ವವಿವರದೊಂದಿಗೆ ಗ್ರೀನ್ ಕೇರ್ ಸಂಸ್ಥೆ, 346, ಸಾಗರ ರೈಸ್ ಮಿಲ್ ಹತ್ತಿರ, ವೀರಭದ್ರಗಲ್ಲಿ ಶಿರಸಿ ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 8197406950, 08384451261, 8904531265 ಸಂಪರ್ಕಿಸಿ ಅ.5 ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಮಹಾಲಕ್ಷ್ಮಿ ಮೆಮೊರಿಯಲ್ ಆಸ್ಪತ್ರೆ ಡಾ.ದಿನೇಶ ಹೆಗಡೆ ಹಾಗೂ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್.ಎಂ. ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನಿಯರ್ ಬಾಲ್ ಬ್ಯಾಡ್ಮಿಂಟನ್ಗೆ ಪ್ರಜ್ವಲ್ ಆಯ್ಕೆ
ಶಿರಸಿ: ಅವೇಮರಿಯ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಕುಮಾರ್ ಪ್ರಜ್ವಲ್ ಕುಬೇರಪ್ಪ ದೊಡ್ಮನಿ ಈತನು ಜೂನಿಯರ್ ಬಾಲ್ ಬ್ಯಾಡ್ಮಿಂಟನ್ನಲ್ಲಿ ಆಯ್ಕೆ ಆಗುವ ಮೂಲಕ ಹರಿಯಾಣ ರಾಜ್ಯದ ರೂತಕ್ನಲ್ಲಿ ನಡೆಯಲಿರುವ 43ನೇ ರಾಷ್ಟ್ರೀಯ ಜೂನಿಯರ್ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದಾನೆ.
ಈತ ಬನವಾಸಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕುಬೇರಪ್ಪ ದೊಡ್ಮನೆ ಇವರ ಪುತ್ರನಾಗಿದ್ದು, ಈತನ ಸಾಧನೆಗೆ ಬನವಾಸಿ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಬನವಾಸಿ ಭಾಗದ ಜನಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕುಸಿದ ಸೇತುವೆಗೆ ಬಿದ್ದು ಇಬ್ಬರಿಗೆ ಗಾಯ
ದಾಂಡೇಲಿ: ಗಾಂಧಿನಗರದಲ್ಲಿ ಕುಸಿದ ಸೇತುವೆಯೊಳಗೆ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಬಿದ್ದು, ದ್ವಿಚಕ್ರ ವಾಹನದಲ್ಲಿದ್ದ ಪತಿ-ಪತ್ನಿ ಇಬ್ಬರಿಗೂ ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯ ಗಾಂಧಿನಗರದ ಕಂಜಾರಭಾಟ್ ನಿವಾಸಿಗಳಾದ ಕದಂ ಲಕ್ಷ್ಮಣ ಕಂಜಾರಭಾಟ್ ಹಾಗೂ ಅವರ ಪತ್ನಿ ಶಾಂತಾ ಕದಂ ಕಂಜಾರಭಾಟ್ ಗಾಯಗೊಂಡವರಾಗಿದ್ದಾರೆ. ಇವರು ನಗರದಿಂದ ಗಾಂಧಿನಗರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಮೊದಲೇ ಕುಸಿದು ಬಿದ್ದಿರುವ ಕಿರು ಸೇತುವೆಯ ಬದಿಯಲ್ಲಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಕುಸಿದ ಸೇತುವೆಯೊಳಗಡೆ ಬಿದ್ದ ಪರಿಣಾಮವಾಗಿ ಇಬ್ಬರಿಗೂ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಸ್ಥಳೀಯ ನಗರಸಭಾ ಸದಸ್ಯೆ ರುಕ್ಮಿಣಿ ಬಾಗಡೆ, ಸ್ಥಳೀಯ ಯುವ ಮುಖಂಡ ಸುಮಿತ್ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಕಳೆದ ಒಂದು ವರ್ಷಗಳ ಹಿಂದೆಯೇ ಇಲ್ಲಿ ಕಿರು ಸೇತುವೆ ಕುಸಿದು ಬಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸೇತುವೆಯ ಎರಡು ಬದಿಯಲ್ಲಿ ದ್ವಿಚಕ್ರ ವಾಹನ ಸಂಚರಿಸಲು ಅವಕಾಶವಿದ್ದರೂ, ಅದು ಈ ರೀತಿಯ ಅನಾಹುತಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿಯ ಕಿರು ಸೇತುವೆಯ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಅಕ್ರಮ ಜಲ್ಲಿ ಸಾಗಾಟ: ವಾಹನ ವಶ
ಹೊನ್ನಾವರ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯಾದ ಆಶಾ ಎಂ.ಎಸ್ ತಡರಾತ್ರಿ ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಲ್ಲಿ ಸಾಗಾಟಕ್ಕೆ ಪರ್ಮಿಟ್ ನವಿಕರಣಗೊಳ್ಳದ ಒಂದು ವಾಹನವನ್ನು ಮಂಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಮೆಟ್ರಿಕ್ ಟನ್ ಎಂದು 35 ಮೆಟ್ರಿಕ್ ಟನ್ ಜಲ್ಲಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಧಿಕ ಭಾರ (ಓವರ್ ಲೋಡ್) ಕಾರಣಕ್ಕೆ ಹೊನ್ನಾವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಅಕ್ರಮ ಮರಳು ಸಾಗಾಟಗಾರರಿಗೆ ಬಿಸಿ
ಹೊನ್ನಾವರ: ತಾಲೂಕಿನ ಕಾಸರಕೋಡ ಸಮೀಪ ಅಕ್ರಮ ಮರಳು ತುಂಬಿದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳಸಿನಮೋಟೆ ಕಡೆಯಿಂದ ಅಕ್ರಮ ಮರಳು ತುಂಬಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ವಾಹನವನ್ನು ವಶಕ್ಕೆ ಪಡೆದು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಯಶಸ್ವಿಯಾದ ಆರೋಗ್ಯ ಶಿಬಿರ
ಯಲ್ಲಾಪುರ: ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಆವಾರದಲ್ಲಿ ಕೆ ಎಸ್ ಹೆಗಡೆ ಆಸ್ಪತ್ರೆಯ ನುರಿತ ವೈದ್ಯರು ಭಾನುವಾರ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದು, 250ಕ್ಕೂ ಅಧಿಕ ರೋಗಿಗಳು ಆಗಮಿಸಿ ಸಲಹೆ ಪಡೆದರು. ಮಂಡಿನೋವು ಹಾಗೂ ಎಲುಬು ಸವಕಳಿ ತಜ್ಞರು ವಿವಿಧ ಔಷಧಿಗಳ ಬಗ್ಗೆ ಮಾಹಿತಿ ನೀಡಿದರು.