ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಪಡೆಯಲು ಉತ್ತರ ಕನ್ನಡ ಜಿಲ್ಲೆಯ 2500 ಮಹಿಳೆಯರು ನಿರಾಕರಿಸಿದ್ದಾರೆ. `ಈ ಹಣ ನಮಗೆ ಬೇಡ’ ಎಂದು ಅವರು ಲಿಖಿತವಾಗಿ ಬರೆದುಕೊಟ್ಟಿದ್ದಾರೆ!
ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತ್ತು. ಅದರಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000ರೂ ಹಣ ಬರುವ ಗೃಹಲಕ್ಷ್ಮಿ ಯೋಜನೆ ಪ್ರಸಿದ್ಧಿ ಪಡೆದಿತ್ತು. ಈ ಯೋಜನೆ ಭರವಸೆ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚು ಸ್ಥಾನಗಳಿಸಿತ್ತು.
ಅಧಿಕಾರಕ್ಕೆ ಬಂದ ನಂತರ ಸರ್ಕಾರ ನುಡಿದಂತೆ ನಡೆದಿದ್ದು, ಯೋಜನೆಯನ್ನು ಅನುಷ್ಠಾನಕ್ಕೆ ತಂದಿತು. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸಮಯಾವಕಾಶವನ್ನು ಸರ್ಕಾರ ನೀಡಿತ್ತು. ಆದರೆ, ಅನೇಕ ಮಹಿಳೆಯರು ಇದಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಈ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ `ನಾವು ಆರ್ಥಿಕವಾಗಿ ಸಭಲರಾಗಿದ್ದೇವೆ. ನಮಗೆ ಈ ಹಣ ಬೇಡ’ ಎಂದು 2500ರಷ್ಟು ಮಹಿಳೆಯರು ಹೇಳಿದ್ದಾರೆ. `ಬಸ್ಸಿನಲ್ಲಿ ಸಹ ನಾವು ಶಕ್ತಿ ಯೋಜನೆ ಬಳಸದೇ ಟಿಕೆಟ್ ಖರೀದಿಸಿ ಓಡಾಡುವೆವು’ ಎಂದಿದ್ದಾರೆ. ಈ ಬಗ್ಗೆ ಆ ಮಹಿಳೆಯರು ಸರ್ಕಾರಕ್ಕೆ ಪತ್ರವನ್ನು ನೀಡಿದ್ದಾರೆ.
`ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಆಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಇಡೀ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ 2500 ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆ ಬೇಡ ಎಂದು ಬರೆದುಕೊಟ್ಟಿದ್ದಾರೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಚ್ ಎಂ ರೇವಣ್ಣ ಅವರೇ ತಿಳಿಸಿದ್ದಾರೆ.