ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 10 ಸಾವಿರ ಹಾಗೂ ಸಹಾಯಕರಿಗೆ 6 ಸಾವಿರ ರೂ ವೇತನ ನೀಡುತ್ತಿದೆ. ಅವರವರ ಅನುಭವ ಆಧಾರದ ಮೇಲೆ ವೇತನವೂ ಏರಿಕೆಯಾಗುತ್ತದೆ. ಜೊತೆಗೆ ವಾಸಸ್ಥಳದಿಂದ 3ಕಿಮೀ ವ್ಯಾಪ್ತಿಯೊಳಗೆ ಉದ್ಯೋಗ ಒದಗಿಸಲಾಗುತ್ತದೆ. ಅದಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ 491 ಹುದ್ದೆಗಳು ಖಾಲಿ ಉಳಿದಿವೆ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳ ಹೊಣೆ ಹೊತ್ತಿದೆ. ಶಿಶು ಅಭಿವೃದ್ಧಿ ಯೋಜನಾ ವಿಭಾಗದ ಮೂಲಕ ಎಲ್ಲಡೆ ಅಂಗನವಾಡಿಗಳನ್ನು ನಿರ್ವಹಿಸುತ್ತದೆ. ಮಕ್ಕಳ ಪೌಷ್ಠಿಕತೆ, ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒತ್ತು ನೀಡಲಾಗುತ್ತಿದೆ. ಆದರೆ, ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳೇ ಇಲ್ಲ!
ಊರಿನಲ್ಲಿರುವ 6 ವರ್ಷದ ಒಳಗಿನ ಮಕ್ಕಳ ಸಂಪೂರ್ಣ ಜವಾಬ್ದಾರಿ ಅಂಗನವಾಡಿ ಕೇಂದ್ರದವರದ್ದಾಗಿರುತ್ತದೆ. ಇದರೊಂದಿಗೆ ಗರ್ಭಿಣಿ ಹಾಗೂ ಬಾಣಂತಿಯರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದು ಹಾಗೂ ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವುದು ಅಂಗನವಾಡಿ ಕೇಂದ್ರದ ಮುಖ್ಯ ಜವಾಬ್ದಾರಿ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕರ ನೇಮಕಾತಿ ಸರ್ಕಾರಕ್ಕೆ ಅನಿವಾರ್ಯವೂ ಹೌದು. ಆದರೆ, ಸಾಕಷ್ಟು ಬಾರಿ ಪ್ರಕಟಣೆ ನೀಡಿದರೂ ಹಲವು ಅಂಗನವಾಡಿ ಕೇಂದ್ರಗಳಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 115 ಅಂಗನವಾಡಿ ಕಾರ್ಯಕರ್ತೆ ಹಾಗೂ 376 ಅಂಗನವಾಡಿ ಸಹಾಯಕಿ ಹುದ್ದೆ ಖಾಲಿಯಿದೆ. ಅಂಕೋಲಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 21, ಭಟ್ಕಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 9, ಅಂಗನವಾಡಿ ಸಹಾಯಕಿ 21, ದಾಂಡೇಲಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 16 ಹುದ್ದೆಗಳಿಗೆ ಅಭ್ಯರ್ಥಿಗಳಿಲ್ಲ. ಹೊನ್ನಾವರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 44 , ಕಾರವಾರ ತಾಲೂಕಿನಲ್ಲಿ ಕಾರ್ಯಕರ್ತೆ 3, ಅಂಗನವಾಡಿ ಸಹಾಯಕಿ 17, ಕುಮಟಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 5, ಅಂಗನವಾಡಿ ಸಹಾಯಕಿ 37, ಮುಂಡಗೋಡ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 9, ಅಂಗನವಾಡಿ ಸಹಾಯಕಿ 39 ಹುದ್ದೆಗಳು ಖಾಲಿಯಿವೆ.
ಸಿದ್ದಾಪುರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 12, ಅಂಗನವಾಡಿ ಸಹಾಯಕಿ 32, ಶಿರಸಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 24, ಅಂಗನವಾಡಿ ಸಹಾಯಕಿ 69, ಜೋಯಿಡಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 20, ಅಂಗನವಾಡಿ ಸಹಾಯಕಿ 34, ಯಲ್ಲಾಪುರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 8, ಅಂಗನವಾಡಿ ಸಹಾಯಕಿ 23, ಹಳಿಯಾಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 13, ಅಂಗನವಾಡಿ ಸಹಾಯಕಿ 23 ಹುದ್ದೆಗಳಿಗೆ ಯೋಗ್ಯರ ಹುಡುಕಾಟ ನಡೆದಿದೆ.
ಈ ಬಾರಿ ಏಪ್ರಿಲ್ 7ರ ಒಳಗಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ರವಾನಿಸಲಾಗಿದೆ. ಆಸಕ್ತರು https://karnemakaone.kar.nic.in/abcd/ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದಾಗಿಯೂ ಆನ್ ಲೈನ್ ಬಗ್ಗೆ ಮಾಹಿತಿ ಇಲ್ಲದವರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಭೇಟಿ ಮಾಡಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ.