ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಇಬ್ಬರು ಪ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. `ಪ್ರಜಾವಾಣಿ’ ವರದಿಗಾರ್ತಿ ಸಂಧ್ಯಾ ಹೆಗಡೆ ಹಾಗೂ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಸೋಮವಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶಿರಸಿಯ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಸಂಧ್ಯಾ ಹೆಗಡೆ ಅವರು ಕಳೆದ 23 ವರ್ಷಗಳಿಂದ ಪ್ರತಿಕೋಧ್ಯಮದಲ್ಲಿದ್ದಾರೆ. ಪ್ರಸ್ತುತ ಅವರು `ಪ್ರಜಾವಾಣಿ’ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಹಿರಿಯ ವರದಿಗಾರರಾಗಿದ್ದಾರೆ. ಪರಿಸರ, ಗ್ರಾಮೀಣ ವರದಿಗಾರಿಕೆ, ತನಿಖಾ ವರದಿಗಳ ಮೂಲಕ ಅವರು ಗಮನಸೆಳೆದಿದ್ದಾರೆ.
`ನುಡಿಜೇನು’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಸಂದೀಪ ಸಾಗರ ಅವರು 18 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿದ್ದಾರೆ. ಟಿವಿ9 ವಾಹನಿ ಮೂಲಕ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ ಅವರು ಸದ್ಯ `ನ್ಯೂಸ್ ಫಸ್ಟ್’ ವಾಹಿನಿಯ ಜಿಲ್ಲಾ ವರದಿಗಾರರಾಗಿದ್ದಾರೆ. ರಾಜಕೀಯ ವಿಶ್ಲೇಷಣೆ ಜೊತೆ ಜಿಲ್ಲೆಯ ಆಗು-ಹೋಗುಗಳ ಬಗ್ಗೆ ವರದಿ ಬಿತ್ತರಿಸಿ ಅವರು ಜನರ ಮನಗೆದ್ದಿದ್ದಾರೆ.
ಈ ಇಬ್ಬರು ಸಾಧಕರಿಗೆ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ `ಸರ್ಕಾರ ಬದಲಿಸುವ ಶಕ್ತಿ ಮಾಧ್ಯಮಕ್ಕಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಾಧ್ಯಮ ನಿರ್ವಹಣೆ ಕೋರ್ಸು ಆರಂಭಿಸುವ ಬಗ್ಗೆ ನನ್ನ ಮಗಳು ಚರ್ಚೆ ಮಾಡಿದ್ದು, ಈ ವರ್ಷದಿಂದ ನಮ್ಮ ಸಂಸ್ಥೆಯಲ್ಲೂ ಸಮೂಹ ಸಂವಹನ ಪತ್ರಿಕೋಧ್ಯಮ ಕೋರ್ಸ್ ಆರಂಭಿಸಲಾಗುತ್ತದೆ’ ಎಂದು ಘೋಷಿಸಿದರು.