ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಸೋಮವಾರ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆಡಳಿತ ಸೌಧದ ಎದುರು ಕೈಗೆ ಕಪ್ಪು ಪಟ್ಟಿಧರಿಸಿ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದರು.
ಈ ದಿನ ಗ್ರಾಮ ಲೆಕ್ಕಾಧಿಕಾರಿಗಳು ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಸೇವೆಯನ್ನು ಸ್ಥಗಿತಗೊಳಿಸಿದ್ದರು. `ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತಾಧಿಕಾರಿಗಳ ಕುಟುಂಬಕ್ಕೆ 50ಲಕ್ಷ ರೂ ಪರಿಹಾರ ಮಂಜೂರು ಮಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. `ಪ್ರತಿಯೊಬ್ಬರಿಗೂ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು. ಕರ್ತವ್ಯದ ವೇಳೆ ಹಲ್ಲೆ ನಡೆದರೆ ಆಪತ್ತಿನ ಭತ್ಯೆ ಒದಗಿಸಬೇಕು. ಪ್ರಯಾಣ ಭತ್ಯೆಯನ್ನು 5 ಸಾವಿರ ರೂಪಾಯಿಗೆ ಏರಿಸಬೇಕು’ ಎಂಬುದನ್ನು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
`ಕoದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡoತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿಯಾಬೇಕು. ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪದೋನ್ನತಿಯು 25-30 ವರ್ಷಕ್ಕೆ ಬರುತ್ತಿದೆ. ಅದನ್ನು ಸರಿಪಡಿಸಬೇಕು. ಅನುಕಂಪದ ಆಧಾರದ ಮೇಲೆ ನೀಡುವ ಪ್ರದಸ ಹುದ್ದೆಯ ನೇಮಕಾತಿಯನ್ನು ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ನೀಡುವ ಬದಲಾಗಿ ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ನೇಮಕ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
`ವಿವಿಧ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಎಫ್ಐಆರ್ ದಾಖಲಿಸುವುದನ್ನು ನಿಲ್ಲಿಸಬೇಕು. ಬದಲಾಗಿ ತಪ್ಪು ಮಾಹಿತಿ ನೀಡುವ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ-ತೋಟಗಾರಿಗೆ ಇಲಾಖೆಗೆ ನಿರ್ವಹಿಸುವಂತೆ ಹಾಗ ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿ ಕೈಬಿಡುವಂತೆ ಸೂಕ್ತ ಆದೇಶವಾಗಬೇಕು’ ಎಂದು ಒತ್ತಾಯಿಸಿದರು.