ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ 27ರಿಂದ ಎರಡು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅಗತ್ಯ ಮುನ್ನಚ್ಚರಿಕೆವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕರೆ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ವಯ ಎರಡು ದಿನಗಳ ಅವಧಿಗೆ ವಿಶೇಷವಾಗಿ ಮಧ್ಯಾಹ್ನ 12ಗಂಟೆಯಿoದ 3ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುದಂತೆ ಸೂಚನೆ ನೀಡಲಾಗಿದೆ. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ನಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿ ಬೂಟುಗಳು ಅಥವಾ ಚಪ್ಪಲ್ಗಳನ್ನು ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಿ ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸುವಂತೆ ಸೂಚಿಸಲಾಗಿದೆ.
ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಯಾರಿಗಾದರೂ ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಓಆರ್ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಮಾತ್ರ ಬಳಸಬೇಕು. ಇವು ದೇಹವನ್ನು ಮರು-ಜಲೀಕರಣ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಬೇಕು ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ತಮ್ಮ ಮನೆಯನ್ನು ತಂಪಾಗಿ ಇರಿಸಿಕೊಳ್ಳಬೇಕು. ಪರದೆಗಳು, ಶಟರ್ಗಳು ಅಥವಾ ಸನ್ಶೇಡ್ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆದಿಡಬೇಕು ಎಂದು ಸಲಹೆ ನೀಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಕಂಡುಬoದಲ್ಲಿ ತುರ್ತು ಸಹಾಯಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ (1077) (08382-229857) ಸಂಪರ್ಕಿಸುವoತೆ ಕೋರಲಾಗಿದೆ.