ಧಾರವಾಡ: ಖಾಸಗಿ ವಿಮೆ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಿದ ಯಲ್ಲಾಪುರದ ಮಾಲತೇಶ ಮೈಲಾರಿ ಎಂಬಾತರು 10 ಲಕ್ಷ ರೂ ಪರಿಹಾರ ಪಡೆದಿದ್ದಾರೆ.
ಸರಕು ಸಾಕಾಣಿಕೆ ಉದ್ದಿಮೆ ನಡೆಸುತ್ತಿದ್ದ ಅವರು ತಮ್ಮ ಸಾಗಾಣಿಕಾ ವಾಹನಕ್ಕೆ 43 ಸಾವಿರ ರೂ ಪಾವತಿಸಿ ವಿಮೆ ಮಾಡಿಸಿದ್ದರು. 2022ರಲ್ಲಿ ಬೇಡ್ತಿ ಸೇತುವೆ ಬಳಿ ಅವರ ವಾಹನ ಅಪಘಾತವಾಗಿದ್ದು, ವಾಹನ ಜಖಂ ಆಗಿತ್ತು. ಹೀಗಾಗಿ ವಿಮಾ ಕಂಪನಿಯಿoದ ಅವರಿಗೆ ಹಣ ಬರಬೇಕಿತ್ತು. ಆದರೆ, ವಿಮಾ ಕಂಪನಿಯವರು ಹಣ ಪಾವತಿಸಲು ಸಿದ್ಧವಿರಲಿಲ್ಲ.
`ಆ ವಾಹನದಲ್ಲಿ ಒಬ್ಬ ಅನಧಿಕೃತ ವ್ಯಕ್ತಿ ಪ್ರಯಾಣಿಸುತ್ತಿದ್ದ. ಜೊತೆಗೆ ಅಪಘಾತದ ವೇಳೆ ವಾಹನದಲ್ಲಿ ವಾಯು ಮಾಲಿನ್ಯ ಪರಿಶೀಲನಾ ಪತ್ರ ಇರಲಿಲ್ಲ’ ಎಂಬ ಕಾರಣ ನೀಡಿ ಪರಿಹಾರ ನೀಡಲು ನಿರಾಕರಿಸಿದ್ದರು. ತಮಗೆ ಆದ ಅನ್ಯಾಯದ ಬಗ್ಗೆ ಹೋರಾಟ ನಡೆಸಿದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ದೂರು ಸಲ್ಲಿಸಿದರು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿದರು. ವಿಚಾರಣೆ ನಡೆಸಿದ ಆಯೋಗದವರು `ಒಬ್ಬ ಪ್ರಯಾಣಿಕ ವಾಹನದಲ್ಲಿ ಪ್ರಯಾಣಿಸಿದ ಸಂಗತಿ ಅಥವಾ ಆ ವಾಹನಕ್ಕೆ ವಾಯು ಮಾಲಿನ್ಯ ಪ್ರಮಾಣ ಪತ್ರ ಇಲ್ಲ ಎಂಬ ವಿಷಯ ವಿಮಾ ಪಾವತಿಗೆ ಅಡ್ಡಿ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
ಅಪಘಾತದ ವೇಳೆ ವಿಮೆ ಚಾಲನೆಯಲ್ಲಿದ್ದಿದ್ದರಿಂದ ಆಗಿರುವ ನಷ್ಟದ ಜೊತೆ ಪ್ರಕರಣ ದಾಖಲಿಸಲು ತಗುಲಿದ ವೆಚ್ಚ, ಶೇ 8ರ ಬಡ್ಡಿ ಹಾಗೂ ಪರಿಹಾರ ನೀಡದೇ ಸತಾಯಿಸಿದಕ್ಕಾಗಿ 1 ಲಕ್ಷ ರೂ ಹೆಚ್ಚುವರಿಯಾಗಿ ನೀಡಬೇಕು ಎಂದು ಗ್ರಾಹಕ ವ್ಯಾಜ್ಯಗಳ ಆಯೋಗ ಯುನಿವರ್ಸಲ್ ಸೋಂಪೊ ವಿಮಾ ಕಂಪನಿಗೆ ಆದೇಶ ನೀಡಿದೆ.
Discussion about this post