ಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್ ಅಧೀವೇಶನದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸಭೆ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು, ತುಳಸಿಗೌಡ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಿದರು.
ತುಳಸಿ ಗೌಡ ಅವರು 1944ರ ಡಿಸೆಂಬರ್ 16ರಂದು ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ್ದರು. `ಪರಿಸರವೇ ನನ್ನ ಉಸಿರು’ ಎಂದು ತಮ್ಮ ಜೀವನದುದ್ದಕ್ಕೂ ಲಕ್ಷಾಂತರ ಮರಗಳನ್ನು ಬೆಳೆಸಿ ಪಾಲನೆ ಪೋಷಣೆ ಮಾಡುವ ಮೂಲಕ `ವೃಕ್ಷ ಮಾತೆ’ ಎಂದು ಕರೆಯಲ್ಪಡುತ್ತಿದ್ದರು. ಯಾವುದೇ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ ಶಾಲಾ ಮಕ್ಕಳಿಗೆ ಗಿಡಗಳನ್ನು ಬೆಳೆಸುವ ತರಬೇತಿ ನೀಡುತ್ತಿದ್ದರು. ಪ್ರತಿ ವರ್ಷ 30 ಸಾವಿರ ಸಸಿಗಳನ್ನು ಅವರು ಪೋಷಿಸುತ್ತಿದ್ದರು.
ತುಳಸಿ ಗೌಡ ಅವರಿಗೆ ಅರಣ್ಯ ತಿಳುವಳಿಕೆ ಅಪಾರವಾಗಿತ್ತು. ಸಾಗವಾನಿಯನ್ನು ಹೆಚ್ಚಾಗಿ ಬೆಳೆಸುತ್ತಿದ್ದ ಅವರು ಎಳ್ಳು, ನಂದಿ, ಪೀಫುಲ್, ಫಿಕಸ್, ಬಿದಿರು, ರಾಟನ್, ಜಮುನ್, ಗೋಡಂಬಿ, ಮತ್ತಿ ಮುಂತಾದ ಮರಗಳ ಅರಿವು ಹೊಂದಿದ್ದರು. ಪರಿಸರದ ಮೇಲಿನ ಅವರ ಪ್ರೀತಿಯನ್ನು ಕಂಡು ಅರಣ್ಯದಲ್ಲಿ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಹಾಗೂ ಪೋಷಿಸುವ ದಿನಗೂಲಿ ನೌಕರಿ ದೊರೆತಿತ್ತು.
ತುಳಸಿ ಗೌಡ ಅವರು ಕಾಡಿನಿಂದ ಅಪರೂಪದ ಬೀಜ ಸಂಗ್ರಹಿಸಿ, ಸಸಿಗಳನ್ನು ಬೆಳಸಿ ಅದೇ ಸಸಿಗಳನ್ನು ಅರಣ್ಯದಲ್ಲಿ, ಸರ್ಕಾರಿ ಕಛೇರಿ, ಶಾಲಾ ಆವರಣ, ರಸ್ತೆಯ ಪಕ್ಕದಲ್ಲಿ ಬೆಳೆಸಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ? ಮುಂತಾದ ಹಲವಾರು ಮಾಹಿತಿಗಳ ಕಣಜವಾಗಿದ್ದ ಅವರು `ಅರಣ್ಯದ ವಿಶ್ವಕೋಶ’ವಾಗಿ ಗುರುತಿಸಿಕೊಂಡಿದ್ದರು. ತುಳಸಿ ಗೌಡ ಅವರ ಪರಿಸರ ಕಾಯಕಕ್ಕೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳಲ್ಲದೆ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದರು.
`ಅವರ ನಿಧನದಿಂದಾಗಿ ರಾಜ್ಯ ಹಾಗೂ ರಾಷ್ಟ್ರವು ಒಬ್ಬ ಶ್ರೇಷ್ಠ ವೃಕ್ಷ ಮಾತೆಯೊಬ್ಬರನ್ನು ಕಳೆದುಕೊಂಡಿದೆ’ ಎಂದು ಸಭಾಪತಿ ಅವರು ಸಂತಾಪ ಸೂಚನೆಯ ನಿರ್ಣಯವನ್ನು ಸದನಕ್ಕೆ ತಿಳಿಸಿದರು. ಸಭಾ ನಾಯಕರು ಮತ್ತು ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದರು. ಮೃತರ ಗೌರವಾರ್ಥ ಮಾನ್ಯ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಉತ್ತರ ಕನ್ನಡ ಜಿಲ್ಲಾಡಳಿತವೂ ಸರ್ಕಾರಿ ಗೌರವದೊಂದಿಗೆ ಪದ್ಮಶ್ರೀ ತುಳಸಿ ಗೌಡ ಅವರ ಅಂತ್ಯಕ್ರಿಯೆ ನಡೆಸಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೇರಿ ಅನೇಕ ಗಣ್ಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.