ಕೆ ಎಂ ಎಫ್ ಅಧ್ಯಕ್ಷರಾಗಲು ತಯಾರಿ ನಡೆಸಿದ್ದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರಿಗೆ ನಂದಿನಿ ಹಾಲು ಒಕ್ಕೂಟಕ್ಕೆ ಸ್ಪರ್ಧಿಸುವ ಅವಕಾಶ ಸಹ ಸಿಗದಿರುವುದು ಬೇಸರ ಮೂಡಿಸಿದ್ದು, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪ್ರಯತ್ನದಲ್ಲಿರುವ ಬಗ್ಗೆ ಮಾತುಗಳು ದಟ್ಟವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಪ್ರಭಾವ ಬೀರಿ ಹಾಲು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ವಿ ಎಸ್ ಪಾಟೀಲ ಅವರಿಗೆ ಸಾಧ್ಯವಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ವಿ ಎಸ್ ಪಾಟೀಲ್ ಅವರಿಗೆ ಕಾಂಗ್ರೆಸ್ಸಿನಲ್ಲಿ ಯಾವ ಹುದ್ದೆಯೂ ಸಿಕ್ಕಿಲ್ಲ. ಜೊತೆಗೆ ವಿಧಾನಸಭೆ ಹಾಗೂ ಲೋಕಸಭೆ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನಪ್ಪಿರುವುದು ಪಕ್ಷ ಸಂಘಟನೆಗೂ ತೊಡಕಾಗಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ವಿ ಎಸ್ ಪಾಟೀಲ್ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದರು. ಅದಾಗಿಯೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಹಿನ್ನಲೆಯಲ್ಲಿ ಪಕ್ಷದಲ್ಲಿ ಮುಂದುವರೆದಿದ್ದರು. ಬದಲಾದ ರಾಜಕೀಯ ಚಿತ್ರಣದಲ್ಲಿ ಕಾಂಗ್ರೆಸ್ ನಾಯಕರು ಪಕ್ಷದಲ್ಲಿರುವ ವಿ ಎಸ್ ಪಾಟೀಲ ಅವರ ಮಾತನ್ನು ಕೇಳುವ ಬದಲು ಅವರ ಎದುರಾಳಿ ಶಿವರಾಮ ಹೆಬ್ಬಾರ್ ಅವರ ಮಾತನ್ನು ಹೆಚ್ಚಿಗೆ ಆಲಿಸುತ್ತಿದ್ದರು. ಲೋಕಸಭಾ ಚುನಾವಣೆ ವೇಳೆಗೆ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿರುವುದನ್ನು ಸಹ ವಿ ಎಸ್ ಪಾಟೀಲ್ ಅವರಿಂದ ಸಹಿಸಿಕೊಳ್ಳಲು ಆಗಿರಲಿಲ್ಲ. ಅದಾಗಿಯೂ ಕೆ ಎಂ ಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಮೌನವಾಗಿದ್ದರು. ಆದರೆ, ಅದು ಸಹ ಅವರ ಕೈ ತಪ್ಪಿದೆ.
ಇನ್ನೂ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ಸಿನಿAದ ಶಿವರಾಮ ಹೆಬ್ಬಾರ್ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದ್ದು, ವಿ ಎಸ್ ಪಾಟೀಲ್ ಅವರಿಗೆ ಅಲ್ಲಿದ್ದ ಅವಕಾಶವೂ ದೂರವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಿಜೆಪಿ ನಾಯಕರ ಸಂಪರ್ಕದಲ್ಲಿರುವ ವಿ ಎಸ್ ಪಾಟೀಲ್ `ತಾನು ಬಿಜೆಪಿಗೆ ಮರಳುವೆ’ ಎಂದು ಮನವಿ ಮಾಡಿದ್ದಾರೆ. ಅದರ ಭಾಗವಾಗಿ ತಮ್ಮ ಅಪ್ಪಟ ಶಿಷ್ಯ ರಾಘು ಭಟ್ಟ ಅವರನ್ನು ಬಿಜೆಪಿಯ ಮನೆಗೆ ಕಳುಹಿಸಿ, ಸ್ಥಳೀಯ ಆಗು-ಹೋಗುಗಳ ಬಗ್ಗೆ ವರದಿ ಪಡೆಯುತ್ತಿದ್ದಾರೆ.
Discussion about this post