`ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಿ, ಪೊಲೀಸ್ ಪ್ರಕರಣ ದಾಖಲಿಸಿ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ, ಈ ಆದೇಶ ಕಿಂಚಿತ್ತು ಪಾಲನೆ ಆಗುತ್ತಿಲ್ಲ!
ಕುಮಟಾದ ಆಳ್ವೆಕೊಡಿ ಬಳಿಯ ಹೊನ್ಮವ ರಾಜ್ಯ ಹೆದ್ದಾರಿ ಪಕ್ಕ ಭಾನುವಾರ ಭಾರೀ ಪ್ರಮಾಣದ ತ್ಯಾಜ್ಯ ಬಿದ್ದಿದೆ. ಪರಿಣಾಮ ಮೀನು ಮಾರುಕಟ್ಟೆ ತಿರುವು ಪ್ರದೇಶ ಗಬ್ಬೆದ್ದಿದೆ. ನಿತ್ಯ ಈ ಮಾರ್ಗದಲ್ಲಿ ಪುರಸಭೆ ವಾಹನ ಸಂಚರಿಸಿದರೂ ತ್ಯಾಜ್ಯ ನಿರ್ವಹಣೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ.
ಅನುದಿನವೂ ಇಲ್ಲಿ ಅನೇಕರು ಆಗಮಿಸಿ ತ್ಯಾಜ್ಯ ಎಸೆಯುತ್ತಿದ್ದಾರೆ. ಬೀಡಾಡಿ ದನಗಳು ಅಲ್ಲಿನ ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯಕ್ಕೊಳಗಾಗುತ್ತಿವೆ. ಗಬ್ಬೆದ್ದ ಕೋಳಿ ತ್ಯಾಜ್ಯ ಬೀದಿ ನಾಯಿಗಳ ಪಾಲಾಗುತ್ತಿದೆ. ರಸ್ತೆ ದಾಟುವ ವೇಳೆ ಜಾನುವಾರುಗಳಿಗೆ ವಾಹನ ಗುದ್ದುವುದು ಇಲ್ಲಿನ ಸಾಮಾನ್ಯ ಸನ್ನಿವೇಶ.
ಈ ಭಾಗದಲ್ಲಿ ದಯಾ ನಿಲಯ ಎಂಬ ಬುದ್ದಿಮಾಂದ್ಯ ವಸತಿ ಶಾಲೆಯೂ ಇದೆ. ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳಿವೆ. ವಿಪರೀತ ತ್ಯಾಜ್ಯದಿಂದ ರೋಗ ಹರಡುವ ಆತಂಕ ಹೆಚ್ಚಾಗಿದೆ. ಅದಾಗಿಯೂ ಪುರಸಭೆ ಸ್ವಚ್ಛತೆ ಬಗ್ಗೆ ಗಮನಹರಿಸುತ್ತಿಲ್ಲ.
`ಈ ಭಾಗದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮವಾಗಬೇಕು. ತ್ಯಾಜ್ಯ ಎಸೆಯುವವರ ಪತ್ತೆಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಕೂಡಲೇ ಸ್ವಚ್ಛತೆಗೆ ಆದ್ಯತೆ ಕೊಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಒಂದು ವಾರದೊಳಗೆ ಯಾವುದೇ ಕ್ರಮವಾಗದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸುಧಾಕರ ನಾಯ್ಕ ಹಾಗೂ ಶಿವು ಮುಕ್ರಿ ಎಚ್ಚರಿಸಿದ್ದಾರೆ.