ಶಿರಸಿಯ ದಾನಕೊಪ್ಪದ ಕಾಳoಗಿ ಸೇವಾ ಸಹಕಾರಿ ಸಂಘದಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನಲೆ ಕೆಡಿಸಿಸಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ವಿಶೇಷ ಸಭೆ ನಡೆಸಿದ್ದಾರೆ.
ಬೆಳೆ ಸಾಲ ತುಂಬಲು ಏಪ್ರಿಲ್ 30 ಕೊನೆ ದಿನವಾಗಿದ್ದು, ಈ ಅವಧಿ ವಿಸ್ತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದರೆ, ಆಡಳಿತ ಮಂಡಳಿ ಇದಕ್ಕೆ ಒಪ್ಪಲಿಲ್ಲ. ಸಂಘದ ಉಪಾಧ್ಯಕ್ಷರ ವಿರುದ್ಧವೂ ಸದಸ್ಯರು ಸಾಕಷ್ಟು ಆರೋಪ ಮಾಡಿದರು.
ಸೊಸೈಟಿ ಗೊಂದಲ ಬಗೆಹರಿಸುವಂತೆ ಆ ಭಾಗದವರು ಶಿವರಾಮ ಹೆಬ್ಬಾರ್ ಅವರನ್ನು ಕೇಳಿಕೊಂಡಿದ್ದು, ಶಿವರಾಮ ಹೆಬ್ಬಾರ್ ಜನರನ್ನು ಸಮಸ್ಯೆ ಆಲಿಸಿದರು. ಈ ವೇಳೆ ಸಹಕಾರಿ ಸಂಘ ಆಡಳಿತ ಮಂಡಳಿಯು ಬೆಳೆ ಸಾಲ ತುಂಬುವ ಆದೇಶಕ್ಕೆ ಸದಸ್ಯರು ಆಕ್ಷೇಪಿಸಿದರು.
ಆಗ ‘ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗಿ ನಾನು ಮೇ 2ನೇ ತಾರಿಕಿನವರೆಗೆ ಬೆಳೆ ಸಾಲ ಪಾವತಿಗೆ ಅವಧಿ ವಿಸ್ತರಿಸಲು ಸಾಧ್ಯ’ ಎಂದು ಶಿವರಾಮ ಹೆಬ್ಬಾರ್ ಹೇಳಿದರು. ‘ಅಷ್ಟರೊಳಗೆ ಸಾಲ ಮರುಪಾವತಿಸಿ’ ಎಂದು ಸೂಚಿಸಿದರು. ಅದಾದ ನಂತರ ಮತ್ತೆ ಕೂಡಲೇ ಬೆಳೆ ಸಾಲ ಮಂಜೂರಿ ಮಾಡಿಸಿಕೊಡುವುದಾಗಿ ಘೋಷಿಸಿದರು. ಇದರಿಂದ ಸದಸ್ಯರು ಸಮಾಧಾನಗೊಂಡರು.
ಹೃದಯ ಆಘಾತ: ಅರಣ್ಯಾಧಿಕಾರಿ ಬದುಕು ಅಂತ್ಯ!
ಕಾರವಾರದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ನವೀನ ಶೆಟ್ಟಿ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಗೋಕರ್ಣ ಮೂಲದ ಅವರು ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿದ್ದರು. ಏಪ್ರಿಲ್ 29ರಂದು ಅವರಿಗೆ ಎದೆನೋವು ಕಾಣಿಸಿಕೊಂಡಿತು. ಹೀಗಾಗಿ ಪಿಕಳೆ ಆಸ್ಪತ್ರೆಯಲ್ಲಿ ತೋರಿಸಿದರು. ಅದೇ ದಿನ ಸಂಜೆ ನವೀನ ಶೆಟ್ಟಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಏಪ್ರಿಲ್ 30ರಂದು ಅವರಿಗೆ ಮತ್ತೆ ಎದೆನೋವು ಕಾಣಿಸಿತು. ಹೀಗಾಗಿ ಅವರನ್ನು ಮತ್ತೆ ಪಿಕಳೆ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆ ನಡೆಸಿದ ವೈದ್ಯರು ನವೀನ ಶಟ್ಟಿ ಅವರು ಸಾವನಪ್ಪಿರುವ ವಿಷಯ ತಿಳಿಸಿದರು. ಅವರ ಪತ್ನಿ ಸರಿತಾ ಶೆಟ್ಟಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ನೀರು ಬಿಡುವ ಸಿಬ್ಬಂದಿಗೆ ಸೇವಾ ನಿವೃತ್ತಿ
ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ರಾಮಣ್ಣ ಅವರು ನಿವೃತ್ತರಾಗಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಅವರು ಸೇವೆಯಲ್ಲಿದ್ದರು. ಈ ಹಿನ್ನಲೆ ಪ ಪಂ ಕಚೇರಿಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ವೇಳೆ ಪ ಪಂ ಸದಸ್ಯ ಕೈಸರ್ ಸಯ್ಯದ್ ಅಲಿ ಅವರು ರಾಮಣ್ಣ ಅವರನ್ನು ಸನ್ಮಾನಿಸಿದರು. ಕಚೇರಿಯ ಹೇಮಚಂದ್ರ ನಾಯ್ಕ, ಗುರು, ಸಂತೋಷ ನಾಯ್ಕ, ಸಂತೋಷ ಶೇಟ್, ವೀಣಾ ಇತರರು ಹಾಜರಿದ್ದರು.
‘ಕಾರ್ಮಿಕನ ಸಾವಿಗೆ ಗುತ್ತಿಗೆದಾರ ಕಾರಣ
ಸುರಕ್ಷತಾ ಪರಿಕರಗಳನ್ನು ಧರಿಸದೆ ಯಂತ್ರ ಬಳಸಿದ ದಾಂಡೇಲಿಯ ಅಬ್ದುಲ್ ಅಲೀಂ ಖಲಾಸಿ ಸಾವನಪ್ಪಿದ್ದಾರೆ.
ಅಬ್ದುಲ್ (53) ಅವರು ಹೀಟ್ ಎಕ್ಸಚೈಂಜರ್’ನ್ನು ಸಾಗಿಸುತ್ತಿರುವಾಗ ಹೀಟ್ ಎಕ್ಸಚೈಂಜರ್ ಅವರ ಮೇಲೆ ಬಿದ್ದು ಸಾವನಪ್ಪಿದ್ದಾರೆ. ಈ ಕುರಿತು ಮೃತ ಕಾರ್ಮಿಕನ ಪತ್ನಿ ಬಾಲಕಿಸ್ ಬಾನು ಅಬ್ದುಲ್ ಖಲಾಸಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಗುತ್ತಿಗೆದಾರ ಸಾಜಿದ್ ಪಠಾಣ , ಮತ್ತು ನಿರೀಕ್ಷಕ ಅಬ್ದುಲ್ ಖಾದೀರ್ ಪಠಾಣ ಅವರೇ ಅಬ್ದುಲ್ ಅವರ ಸಾವಿಗೆ ಕಾರಣ’ ಎಂದವರು ದೂರಿದ್ದಾರೆ. ‘ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕೆಲಸ ಮಾಡಿಸಿ ಕೊಂಡಿದ್ದರಿಂದ ಈ ಸಾವು ಸಂಭವಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿದ್ದಾರೆ. ನಗರ ಠಾಣೆಯ ಪಿಎಸ್ಐ ಅಮೀನಸಾಬ್ ಅತ್ತಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಸವಣ್ಣನ ನೆನಪಿನಲ್ಲಿ ಅನ್ನದಾನ
ಯಲ್ಲಾಪುರದ ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯವರುವ ಬಸವೇಶ್ವರ ಜಯಂತಿ ಆಚರಿಸಿದ್ದು, ಈ ವೇಳೆ ಅನ್ನದಾನ ಮಾಡಿದರು.
ಜಯ ಕರ್ನಾಟಕ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಊಟ ಬಡಿಸಿದರು. ಬಸವಣ್ಣನವರ ತತ್ವ-ಆದರ್ಶಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಜಯ ಕರ್ನಾಟಕ ಸಂಘಟನೆ ಸದಸ್ಯರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.