ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿ ಎನ್ ಹೆಗಡೆ ಟ್ರಸ್ಟ್’ಗೆ 99 ವರ್ಷದ ಅವಧಿಗೆ 15 ಎಕರೆ ಜಾಗ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಮಂಕಾಳು ವೈದ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಬಹುದಿನದ ಬೇಡಿಕೆ. ಈ ಬಗ್ಗೆ ವೈದ್ಯ ಡಾ ಜಿ ಜಿ ಹೆಗಡೆ ಸಹ ಧ್ವನಿ ಎತ್ತಿದ್ದು, ಸರ್ಕಾರ ಜಾಗ ನೀಡಿದಲ್ಲಿ ಆಸ್ಪತ್ರೆ ಕಟ್ಟಲು ಬದ್ಧ ಎಂದಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಪತ್ರವನ್ನು ಬರೆದಿದ್ದರು. ಈ ಹಿನ್ನಲೆ ಮಂಕಾಳು ವೈದ್ಯ ಇದೀಗ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕಳೆದ 31 ವರ್ಷಗಳಿಂದ ಜಿ ಎನ್ ಹೆಗಡೆ ಟ್ರಸ್ಟ್’ನ ಅಡಿ 50 ಹಾಸಿಗೆಯ ಕೆನರಾ ಹೆಲ್ತ ಕೇರ್ ಸೆಂಟರ್ ಸ್ಪೆಶಾಲಿಟಿ ಆಸ್ಪತ್ರೆ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ಇಲ್ಲಿನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನಲೆ ಅವರ ಬೇಡಿಕೆಯಂತೆ ಕುಮಟಾದಲ್ಲಿರುವ ಸರ್ವೆ ನಂಬರ್ 440/ಅ/ಬ ಕ್ಷೇತ್ರ 17-14-0ರ ಪೈಕಿ 3-10-0 ಹಾಗೂ ಸರ್ವೆ ನಂ 440/ಅ/ಅ ಕ್ಷೇತ್ರ 35-28-0ರ ಪೈಕಿ 11-19-0 ಸೇರಿ ಒಟ್ಟು 15 ಎಕರೆ ಜಾಗವನ್ನು ಜಿ ಎನ್ ಹೆಗಡೆ ಟ್ರಸ್ಟ್’ಗೆ 99 ವರ್ಷದ ಅವಧಿಯ ಲೀಸ್’ಗೆ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ.
`ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಟ್ರಸ್ಟ್ ನೀಡಿದ ಮನವಿಗೆ ಸಚಿವರು ಸ್ಪಂದಿಸಿದ್ದಾರೆ. ಎಷ್ಟು ಬೇಗ ಭೂಮಿ ಸಿಗುತ್ತದೋ, ಅಷ್ಟು ಬೇಗ ಆಸ್ಪತ್ರೆ ನಿರ್ಮಿಸಲು ಸಿದ್ಧ’ ಎಂದು ಡಾ ಜಿ ಜಿ ಹೆಗಡೆ ಪ್ರತಿಕ್ರಿಯಿಸಿದ್ದಾರೆ.