ಯಲ್ಲಾಪುರ: ಸಾಮಾಜಿಕ ಜಾಲತಾಣದಲ್ಲಿ ನಿಂದನಾರ್ಹ ಬರಹ ಪ್ರಕಟಿಸಿದ ಕಾರಣ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಮತ್ತೊಂದು ಪೊಲೀಸ್ ಪ್ರಕರಣ ದಾಖಲಾಗಿದೆ.
ಸೋಮೇಶ್ವರ ನಾಯ್ಕ ರವೀಂದ್ರ ನಗರವನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಹ ಅವರ ವಿರುದ್ಧ ಪೊಲೀಸರು ಸುಮೊಟೋ ದೂರು ದಾಖಲಿಸಿದ್ದರು. ಇದೀಗ ಸಬಗೇರಿಯ ಚಾಲಕ ಬಾಲಕೃಷ್ಣ ನಾಯ್ಕ ಎಂಬಾತರು ಸೋಮೇಶ್ವರ ನಾಯ್ಕ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ನ 26ರ ಸಂಜೆ ಸೋಮೇಶ್ವರ ನಾಯ್ಕ ವಾಟ್ಸಪ್ ಸ್ಟೇಟಸ್ಸಿನಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ನಿಂದನಾರ್ಹ ಪೋಸ್ಟ್ ಪ್ರಕಟಿಸಿದ್ದರು. `ಅಯೋಗ್ಯ ಶಾಸಕ’ ಎಂಬುದನ್ನು ಸೇರಿ ವಿವಿಧ ಪದ ಪ್ರಯೋಗ ಮಾಡಿದ್ದರು. ಸರ್ಕಾರಿ ಜಾಗ ಲೂಟಿ ಸೇರಿ ವಿವಿಧ ವಿಷಯಗಳ ಬಗ್ಗೆ ಬರೆದುಕೊಂಡಿದ್ದರು. ಸೋಮೇಶ್ವರ ನಾಯ್ಕ ಬಳಸಿದ ಬಹುತೇಕ ಪದ ಅರ್ಥವಾಗುವ ಹಾಗಿರಲಿಲ್ಲ. ಅದಾಗಿಯೂ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಗುರಿಯಾಗಿರಿಸಿಕೊಂಡು ಬರದಂತೆ ಭಾಸವಾಗುತ್ತಿತ್ತು.
ಈ ಹಿನ್ನಲೆ ಶಾಸಕರ ಬಗ್ಗೆ ಅಸಂವಿಧಾನಿಕ ಪದ ಪ್ರಯೋಗ, ಅಗೌರವ, ತೇಜೋವಧೆ ಮಾಡಿದ ಹಿನ್ನಲೆ ಪ್ರಕರಣ ದಾಖಲಾಗಿದೆ. ಇದಲ್ಲದೇ, ಸೋಮೇಶ್ವರ ನಾಯ್ಕ ಸಾರ್ವಜನಿಕರಿಗೆ ಬೆದರಿಕೆ, ಸುಲಿಗೆ ಹಾಗೂ ಸಮಾಜದಲ್ಲಿ ಶಾಂತಿ ಕದಡುತ್ತಿರುವುದಾಗಿಯೂ ಬಾಲಕೃಷ್ಣ ನಾಯ್ಕ ದೂರು ನೀಡಿದ್ದಾರೆ. ಎಎಸ್ಐ ದೀಪಕ ನಾಯ್ಕ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.