ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ಸುಮಂಗಲ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾದ ಸುಮಂಗಲಾ ಹೆಗಡೆ ಅವರು ಗೋಕರ್ಣದ ಬಳಿಯ ಅಪಘಾತದಲ್ಲಿ ಕೊನೆ ಉಸಿರೆಳೆದಿದ್ದಾರೆ.
ಅಂಕೋಲಾ ತಾಲೂಕಿನ ಹಿಲ್ಲೂರ ಹಳೆಕೇರಿಯ ಸುಮಂಗಲ ಕೃಷ್ಣ ಹೆಗಡೆ (51) ಅವರು ಬುಧವಾರ ಬೈಕಿನಲ್ಲಿ ಗೋಕರ್ಣದ ಕಡೆ ಸಂಚರಿಸುತ್ತಿದ್ದರು. ಕೃಷ್ಣ ಹೆಗಡೆ ಅವರು ಬೈಕ್ ಓಡಿಸುತ್ತಿದ್ದು, ಸುಮಂಗಲಾ ಹೆಗಡೆ ಅವರು ಹಿಂಬದಿ ಸವಾರರಾಗಿದ್ದರು. ಗೋಕರ್ಣ ರಾಜ್ಯ ಹೆದ್ದಾರಿಯ ಭದ್ರಕಾಳಿ ಕಾಲೇಜಿನ ಬಳಿ ಸುಮಂಗಲಾ ಹೆಗಡೆ ಬೈಕಿನಿಂದ ಕೆಳಗೆ ಬಿದ್ದರು.
ಬಿದ್ದ ರಭಸಕ್ಕೆ ಅವರ ತಲೆಗೆ ಪೆಟ್ಟಾಯಿತು. ಚೇತರಿಸಿಕೊಳ್ಳುವುದರೊಳಗೆ ಅವರು ಅಲ್ಲಿಯೇ ಸಾವನಪ್ಪಿದರು. ರಸ್ತೆ ಪಕ್ಕ ಮಣ್ಣಿನ ರಾಶಿ ಹಾಕಿರುವುದು ಅಪಘಾತಕ್ಕೆ ಕಾರಣ ಎಂಬ ದೂರಿದೆ. ಅಪಘಾತವಾದ ಸ್ಥಳ ಶಾಲಾ ವಲಯವೂ ಆಗಿದ್ದು, ಇಲ್ಲಿನ ರಸ್ತೆಗೆ ಅಡ್ಡಲಾಗಿ ಹಂಪ್ಸ್ ಅಳವಡಿಸಬೇಕು ಎಂಬ ಬೇಡಿಕೆಯಿದ್ದರೂ ಆ ಬೇಡಿಕೆ ಹಾಗೇ ಉಳಿದಿದೆ.