ಅಂಕೋಲಾ: ರಾಜೀವಗಾಂಧಿ ವಸತಿ ನಿಗಮದ ಬಸವ ವಸತಿ ಯೋಜನೆ ಅಡಿ ನಿರ್ಮಾಣವಾಗುತ್ತಿದ್ದ ಬಡವರ ಮನೆಗಳ ಮೇಲೆಯೂ ಅರಣ್ಯಾಧಿಕಾರಿಗಳ ವಕೃದೃಷ್ಠಿ ಬಿದ್ದಿದೆ. ಮನೆಯ ನೆಲಗಟ್ಟು ಹಾಕಿ ಗೋಡೆ ನಿರ್ಮಿಸಿದ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಆ ಮನೆಯನ್ನು ನೆಲಸಮ ಮಾಡಿದ್ದಾರೆ!
ತಳಗದ್ದೆಯ ಮಂಗಳಾ ಗೌಡ ಅವರು ಗ್ರಾ ಪಂ ನೆರವಿನಲ್ಲಿ ಮನೆ ನಿರ್ಮಿಸುತ್ತಿದ್ದರು. ಆರ್ಥಿಕ ತೊಂದರೆ ಕಾರಣ ನಿಧಾನವಾಗಿ ಮನೆ ಕೆಲಸ ನಡೆಸುತ್ತಿದ್ದರು. ಸರ್ಕಾರದಿಂದ ಅವರಿಗೆ ಮೊದಲ ಕಂತಿನ ರೂಪದಲ್ಲಿ 29400ರೂ ಹಣ ಬಂದಿದ್ದು, ಆ ಹಣ ಬಳಸಿಕೊಂಡು ಮನೆಯ ಗೋಡೆ ಏರಿಸಿದ್ದರು.
ಇದನ್ನು ಸಹಿಸದ ಕಿಡಿಗೇಡಿಗಳು ಅರಣ್ಯಾಧಿಕಾರಿಗಳಿಗೆ ಮೂಕರ್ಜಿ ಬರೆದರು. ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಸಾಲು ನೋಡಿದ ಅರಣ್ಯ ಸಿಬ್ಬಂದಿ ಪೂರ್ವಾಪರ ಯೋಚಿಸದೇ ಮನೆ ಮುರಿದರು. 80 ವರ್ಷಗಳ ಹಿಂದಿನಿAದಲೂ ಇಲ್ಲಿ ಗೌಡರ ಕುಟುಂಬ ವಾಸವಾಗಿದ್ದನ್ನು ಅರಣ್ಯಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಆ ಬಗ್ಗೆ ಕಡತಗಳ ಪರಿಶೀಲನೆಯನ್ನು ಮಾಡಿಲ್ಲ. ಮನೆ ಮಾಲಕರು ಪರಿಪರಿಯಾಗಿ ಬೇಡಿಕೊಂಡರೂ ಮನೆ ಒಡೆಯುವ ಕೆಲಸವನ್ನು ಮಾತ್ರ ಬಿಡಲಿಲ್ಲ.
ಮನೆ ಮುರಿಯುವ ಮುನ್ನ ಗ್ರಾ ಪಂ ಕಚೇರಿಗೂ ಮಾಹಿತಿ ನೀಡಿಲ್ಲ. ಸರ್ಕಾರಿ ಯೋಜನೆ ಬಗ್ಗೆಯೂ ಅವರು ಅರಿತಿಲ್ಲ. ನೆಲಗಟ್ಟು ಹಾಕುವಾಗ ಮೌನವಾಗಿದ್ದ ಅಧಿಕಾರಿಗಳು ಗೋಡೆ ಕಟ್ಟಿದ ನಂತರ ಮನೆ ಮುರಿದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.