ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡ ಕಳ್ಳರು ರೈಲಿನಲ್ಲಿ ಸಂಚರಿಸುತ್ತಿದ್ದವರ ಹಣ ಹಾಗೂ ಮೊಬೈಲ್ ದೋಚಿದ್ದಾರೆ. ಕಳ್ಳರ ಕಾಟದ ಬಗ್ಗೆ ದೂರು ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆ ದೂರನ್ನು ಜಿಲ್ಲಾ ಪೊಲೀಸ್ ಘಟಕ್ಕೆ ವರ್ಗಾಯಿಸಿದ್ದು, ಮೂರು ಪ್ರಕರಣಗಳಲ್ಲಿಯೂ ಮಹಿಳೆಯರೇ ಸಂತ್ರಸ್ತರು!
ಮುoಬೈನ ಸುಶೀಲಾ ಓಂ ಪ್ರಕಾಶ ಮರ್ಯಾ ಅವರು ಅಗಸ್ಟ 18ರಂದು ನೇತ್ರಾವತಿ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಕುಮಟಾ – ಕಾರವಾರ ನಡುವೆ ಅವರ ಮಂಗಲ ಸೂತ್ರವನ್ನು ಅಪಹರಿಸಿದ್ದಾರೆ. 85 ಸಾವಿರ ರೂ ಮೌಲ್ಯದ ಚಿನ್ನದ ಸರ ಅದಾಗಿದ್ದು, ಅದನ್ನು ಹುಡುಕಿಕೊಡುವ ಹೊಣೆ ಜಿಲ್ಲಾ ಪೊಲೀಸರಿಗೆವಹಿಸಲಾಗಿದೆ. ಮುಂಬೈಯ ಮಾಧವಿ ಅಶೋಕ ಮೋರೆ ಅವರು ಮಾರ್ಚ 7ರಂದು ಮಂಗಲದ್ವೀಪ್ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಅವರ ಬಳಿಯಿದ್ದ ಕಿವಿಯೋಲೆಯನ್ನು ಕಳ್ಳರು ಅಪಹರಿಸಿದ್ದಾರೆ. ಜೊತೆಗೆ 3 ಸಾವಿರ ರೂ ಹಣವೂ ಕಳ್ಳರ ಪಾಲಾಗಿದೆ. ಇದರೊಂದಿಗೆ ಜೂನ್ 25ರಂದು ಕೇರಳದ ಸಂಜನಾ ಅವರು ಪೂರ್ಣ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾಗ ಅವರ ಬಳಿಯಿದ್ದ 10 ಸಾವಿರ ರೂ ಮೌಲ್ಯದ ಮೊಬೈಲ್ ಕಳ್ಳರು ದೋಚಿದ್ದಾರೆ.
ಈ ಮೂರು ಪ್ರಕರಣಗಳು ಕುಮಟಾ ವ್ಯಾಪ್ತಿಗೆ ಒಳಪಟ್ಟು ನಡೆದಿದೆ. ಜೊತೆಗೆ ಎಲ್ಲಾ ಕಳ್ಳತನಗಳು ಬೆಳಗ್ಗಿನ ಜಾವ 2ಗಂಟೆಯಿoದ 7 ಗಂಟೆಯ ಒಳಗೆ ನಡೆದಿದೆ. ದೂರುದಾರರು ಸಹ ಕುಮಟಾ ಭಾಗದಲ್ಲಿಯೇ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕುಮಟಾ ಪೊಲೀಸರಿಗೆ ಈ ಪ್ರಕರಣದ ತನಿಖೆ ನಡೆಸಲು ಅಧಿಕಾರ ನೀಡಲಾಗಿದೆ. ಹೀಗಾಗಿ ಮಹಿಳೆಯರ ಆಭರಣ ಹಾಗೂ ಹಣ ಹಿಂತಿರುಗಿಸುವುದರ ಜೊತೆ ಕಳ್ಳರನ್ನು ಸೆದೆಬಡಿಯುವ ಹೊಣೆ ಸಹ ಕುಮಟಾ ಪೊಲೀಸರದ್ದಾಗಿದೆ. ಈ ಹಿನ್ನಲೆ ಕೊಂಕಣ ರೈಲ್ವೆ ಮಾರ್ಗದ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ.