ಶಿರಸಿ: TSS ಸಂಸ್ಥೆ ಅಧ್ಯಕ್ಷರ ಕೊಠಡಿಗೆ ನುಗ್ಗಿ ಅಲ್ಲಿನ ಸಿಬ್ಬಂದಿ ನಿಂದಿಸಿದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಡಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (33) ಹಾಗೂ ರಂಜಿತಾ ಹರಿಹರ ಹೆಗಡೆ (35) ತಮ್ಮ ಜಮೀನು ವಿಷಯವಾಗಿ ಟಿಎಸ್ಎಸ್ ಕಚೇರಿಗೆ ಆಗಮಿಸಿದ್ದರು. 2010ರಲ್ಲಿ TSS’ನಲ್ಲಿ ಅವರು ಸಾಲ ಪಡೆದಿದ್ದು ಅದನ್ನು ತೀರಿಸಿರಲಿಲ್ಲ. 5 ವರ್ಷದ ಹಿಂದೆ ಈ ಜಮೀನು ಹರಾಜಾಗಿದ್ದು, ಬಡ್ಡಿಸಹಿತ ಸಾಲದ ಮೊತ್ತ ಸಂಸ್ಥೆಗೆ ತಲುಪಿತ್ತು. ಆ ಜಮೀನನ್ನು ಬೇರೆಯವರು ಖರೀದಿಸಿದ್ದರು. ಆದರೆ, ಇದೀಗ ಬಂದ ಈ ಸಹೋದರಿಯರು `ತಮ್ಮ ಜಮೀನು ತಮಗೆ ಕೊಡಿ’ ಎಂದು ದುಂಬಾಲು ಬಿದ್ದಿದ್ದರು. ಸೆ 4ರ ಸಂಜೆ 5 ಗಂಟೆಗೆ ಟಿಎಸ್ಎಸ್ ಕಚೇರಿಗೆ ಆಗಮಿಸಿ ಜಮೀನಿಗಾಗಿ ಪಟ್ಟು ಹಿಡಿದಿದ್ದರು.
ಅಲ್ಲಿನ ಆಡಳಿತ ಮಂಡಳಿಯವರು ಹಿಂದಿನ ಪ್ರಕರಣಗಳ ಬಗ್ಗೆ ವಿವರಿಸಿ ಮಾಹಿತಿ ನೀಡಿದ್ದು, ಅದನ್ನು ಒಪ್ಪಿಕೊಳ್ಳಲು ಈ ಇಬ್ಬರು ಮಹಿಳೆಯರು ಸಿದ್ದರಿರಲಿಲ್ಲ. ಸಿಬ್ಬಂದಿ ವಿರುದ್ಧ ಕಿಡಿಕಾರಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದರು. ಕೆಟ್ಟದಾಗಿ ಬೈದಿದ್ದರು. ಇಷ್ಟಲ್ಲದೇ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿದರು. ಆಗ ಅದನ್ನು ತಡೆಯಲು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಚೇರಿ ಸಮಯ ಮುಗಿದರೂ ಅವರು ಮನೆಗೆ ಮರಳದೇ ರಾದ್ಧಾಂತ ನಡೆಸಿದ್ದು, ಸಂಸ್ಥೆ ಉಪ ವ್ಯವಸ್ಥಾಪಕ ಪ್ರಕಾಶ ಹೆಗಡೆ ಇಬ್ಬರ ವಿರುದ್ಧ ದೂರು ನೀಡಿದರು.
ಆಗ ಅಲ್ಲಿಗೆ ಆಗಮಿಸಿದ ಮಹಿಳಾ ಪೊಲೀಸರ ಮೇಲೆ ಸಹ ಈ ಇಬ್ಬರು ಹಲ್ಲೆ ನಡೆಸಿದ್ದು, ಇದರಿಂದ ಸಿಟ್ಟಾದ ಪೊಲೀಸರು ಕೂಡಲೇ ಆ ಇಬ್ಬರನ್ನು ವಶಕ್ಕೆ ಪಡೆದರು. ಈ ಕುರಿತು ಪಿಎಸ್ಐ ರತ್ನಾ ಕುರಿ ಸಹ ಪ್ರತ್ಯೇಕ ದೂರು ನೀಡಿದ್ದು ಎರಡೂ ದೂರಿನ ಅಡಿ ಈ ಸಹೋದರಿಯರನ್ನು ಬಂಧಿಸಲಾಗಿದೆ. ನ್ಯಾಯಾಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪವಿತ್ರಾ ಹಾಗೂ ರಂಜನಾರ ರಂಪಾಟದ ವಿಡಿಯೋ ಇಲ್ಲಿ ನೋಡಿ…