ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಕೆಲಸದ ಅವಧಿಯಲ್ಲಿ 4ನೇ ಮಹಡಿಗೆ ತೆರಳಿದ್ದ ಕಾರ್ಮಿಕ ಅಲ್ಲಿಂದ ಕಾಲುಜಾರಿ ಬಿದ್ದು ಸಾವನಪ್ಪಿದ್ದಾನೆ. ಪ್ರಸ್ತುತ ಕಾರ್ಮಿಕನ ಶವ ಶವ ಪತಂಜಲಿ ಆಸ್ಪತ್ರೆಯಲ್ಲಿದೆ.
ಜಾರ್ಖಂಡ್ ಮೂಲದ ಮಹತಾಬ ಅನ್ಸಾರಿ (27) ಅಮದಳ್ಳಿ ಗಾಂವಕಾರವಾಡದಲ್ಲಿ ವಾಸವಾಗಿದ್ದ. ಎನ್ ಸಿ ಸಿ ಕಂಪನಿ ಮೂಲಕ ಆತ ಸೀಬರ್ಡ ನೌಕಾನೆಲೆ ಒಳಗೆ ಕೆಲಸಕ್ಕೆ ಸೇರಿಕೊಂಡಿದ್ದ. ಕಂಪನಿಯವರು ನೀಡಿದ ಹೆಲ್ಮಟ್ ಹಾಗೂ ಇನ್ನಿತರ ಸುರಕ್ಷಾ ಸಾಮಗ್ರಿ ಧರಿಸಿದ್ದರೂ ಆತನನ್ನು ಅಪಾಯದಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ.
ನವೆಂಬರ್ 5ರಂದು ಬೆಳಗ್ಗೆ 11 ಗಂಟೆಗೆ ಮಹತಾಬ ಅನ್ಸಾರಿ 4ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ಕಾಲು ಜಾರಿ ನೆಲಕ್ಕೆ ಅಪ್ಪಳಿಸಿದ್ದ. ತಲೆ, ಕೈ ಕಾಲು, ಮೈ ಪೂರ್ತಿ ಗಾಯವಾಗಿರುವುದನ್ನು ಗಮನಿಸಿದ ಇತರೆ ಕಾರ್ಮಿಕರು ಆತನನ್ನು ಪತಂಜಲಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಮಧ್ಯಾಹ್ನದ ವೇಳೆಗೆ ಆತ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು.
ಈ ವಿಷಯ ಅರಿತ ಮಹತಾಬ ಅನ್ಸಾರಿಯ ಅಣ್ಣ ಹಕ್ಕೀಂ ಜಾರ್ಖಂಡ್ ಪೊಲೀಸ್ ಠಾಣೆಗೆ ತೆರಳಿದ್ದು, `ಈ ಅವಘಡದಲ್ಲಿ ಕಂಪನಿಯ ತಪ್ಪಿಲ್ಲ. ಹೀಗಾಗಿ ಅವರ ವಿರುದ್ಧ ನಾನು ದೂರು ಕೊಡುವುದಿಲ್ಲ’ ಎಂದು ಇ-ಮೇಲ್ ಮಾಡಿದ್ದಾರೆ. ಸಾವನಪ್ಪಿದವನ ಶವವನ್ನು ಬಿಟ್ಟುಕೊಡುವಂತೆ ಅವರು ಇ-ಮೇಲ್ ಮೂಲಕವೇ ತಿಳಿಸಿದ್ದಾರೆ.