ಶಿರಸಿ: ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ `ನಮ್ಮನೆ ಹಬ್ಬ’ ಡಿಸೆಂಬರ್ 8ರಂದು ಸಂಜೆ 5ರಿಂದ ತಾಲೂಕಿನ ಬೆಟ್ಟಕೊಪ್ಪದ `ನಮ್ಮನೆ’ ವೇದಿಕೆಯಲ್ಲಿ ನಡೆಯಲಿದೆ.
ನಮ್ಮನೆ ಹಬ್ಬ ಎಂದರೆ ಕೇವಲ ಒಬ್ಬರ ಮನೆ ಹಬ್ಬವಲ್ಲ. ಎಲ್ಲರನ್ನೂ ಒಳಗೊಂಡು ಆಚರಿಸುವ ಸಾಂಸ್ಕೃತಿಕ ದಿಬ್ಬಣ. ಸಾಂಸ್ಕೃತಿಕ ಸಂಭ್ರಮ, ಪ್ರಶಸ್ತಿ ಪ್ರದಾನ, ಮಾತು, ಯಕ್ಷ ನೃತ್ಯ, ಸಂಗೀತಗಳ ಮಿಲನ ನಮ್ಮನೆ ಹಬ್ಬ. ಈ ಹಬ್ಬಕ್ಕೆ ಇದೀಗ 13ನೇ ವರ್ಷದ ಸಂಭ್ರಮ. ವಿಶ್ವಶಾಂತಿ ಸರಣಿಯ ಯಕ್ಷನೃತ್ಯ ರೂಪಕಗಳಿಗೆ ಈ ವರ್ಷ ದಶಮಾನೋತ್ಸವದ ಮೆರುಗು. ಈ ಹಿನ್ನಲೆ ವಿಶ್ವಶಾಂತಿ ಸೇವಾ ಟ್ರಸ್ಟ್ ಬಗೆ ಬಗೆಯ ಕಾರ್ಯಕ್ರಮ ಆಯೋಜಿಸಿದೆ. ಈ ವೇದಿಕೆಯಲ್ಲಿ ಗಾನ ಸಂಭ್ರಮ, ಯಕ್ಷರೂಪಕದ ದಶಮಾನೋತ್ಸವ, ನೂತನ ರೂಪಕ ಲೋಕಾರ್ಪಣೆ, ಪ್ರಶಸ್ತಿ, ಪುರಸ್ಕಾರ ಪ್ರದಾನ, ಕ್ಯಾಲೆಂಡರ್ ಲೋಕಾರ್ಪಣೆ ನಡೆಯಲಿದೆ. ಈ ಮೂಲಕ ಸಾಂಸ್ಕೃತಿಕ, ಕಲಾ ವೈಭವ ಸಾರುವ ಪ್ರಯತ್ನ ನಡೆಸಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.
ವಿಶ್ವಾಭಿಗಮನಮ್ ಲೋಕಾರ್ಪಣೆ:
ಸಂಜೆ 5ರಿಂದ ಇಳಿಹೊತ್ತಿನಲ್ಲಿ ಸಂಗೀತ ಕಾರ್ಯಕ್ರಮವನ್ನು ಬಿಗ್ ಬಾಸ್ ಖ್ಯಾತಿಯ, ಪ್ರಸಿದ್ಧ ಗಾಯಕ ರವಿ ಮೂರೂರ ನಡೆಸಿಕೊಡಲಿದ್ದಾರೆ. ಹಾರ್ಮೋನಿಯಂನಲ್ಲಿ ಸತೀಶ ಹೆಗ್ಗಾರು, ತಬಲಾದಲ್ಲಿ ಗಣೇಶ ಗುಂಡ್ಕಲ್ ಸಾತ್ ನೀಡಲಿದ್ದಾರೆ. 6:10ಕ್ಕೆ ವಿಶ್ವಶಾಂತಿ ಸರಣಿಯ 10ನೇಯ ನೂತನ ಯಕ್ಷ ನೃತ್ಯ ರೂಪಕ ಭಾವ ಸೌಂದರ್ಯದ ದಿವ್ಯದರ್ಶನ `ವಿಶ್ವಾಭಿಗಮನಮ್’ ಅನಾವರಣಗೊಳ್ಳಲಿದೆ. ಇದಕ್ಕೆ ಸಾಹಿತ್ಯವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ನೀಡಿದ್ದು ನಿರ್ದೇಶನವನ್ನು ವಿ.ಉಮಾಕಾಂತ ಭಟ್ಟ ಒದಗಿಸಿದ್ದಾರೆ.
ಮೂಲ ಕಲ್ಪನೆ ರಮೇಶ ಹೆಗಡೆ, ಹಳೆಕಾನಗೋಡ ಹಾಗೂ ಗಾಯತ್ರೀ ರಾಘವೇಂದ್ರ ಅವರದ್ದಾಗಿದ್ದು, ನೃತ್ಯ ಸಲಹೆಯನ್ನು ವಿನಾಯಕ ಹೆಗಡೆ ಕಲಗದ್ದೆ, ಹಿನ್ನೆಲೆ ಧ್ವನಿಯನ್ನು ಡಾ. ಶ್ರೀಪಾದ ಭಟ್ಟ ನೀಡಿದ್ದಾರೆ.
ತಾಳಾಭ್ಯಾಸ ಜಿ.ಎಸ್.ಭಟ್ಟ ಪಂಚಲಿAಗ, ಧ್ವನಿ ಗ್ರಹಣ ಉದಯ ಪೂಜಾರ ಸಮಗ್ರ ನಿರ್ವಹಣೆ ಗಾಯತ್ರೀ ರಾಘವೇಂದ್ರ ಮಾಡಿದ್ದಾರೆ. ನೂತನ ರೂಪಕವನ್ನು 50 ನಿಮಿಷಗಳ ಕಾಲ ತುಳಸಿ ಹೆಗಡೆ ಪ್ರಸ್ತುತಗೊಳಿಸಲಿದ್ದಾರೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ.
ಪ್ರಶಸ್ತಿ ಪ್ರದಾನ, ಕ್ಯಾಲೆಂಡರ್ ಬಿಡುಗಡೆ
ನಮ್ಮನೆ ಹಬ್ಬದ ಉದ್ಘಾಟನೆಯನ್ನು ಪ್ರಸಿದ್ಧ ಚಿತ್ರನಟಿ ಪೂಜಾ ಗಾಂಧಿ ನೆರವೇರಿಸಲಿದ್ದು, ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಪ್ರದಾನ ಮಾಡಲಿದ್ದಾರೆ. ಪ್ರಸಿದ್ಧ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಬೆಂಗಳೂರಿನ ಅವಿನಾಶಿ ಸಂಸ್ಥೆ ಮುಖ್ಯಸ್ಥ ಅಣ್ಣಾರಾಯ ತಳವಾರ ಅವರಿಗೆ ನಮ್ಮನೆ ಪ್ರಶಸ್ತಿ, ಧಾರವಾಡದ ಯುವ ಗಾಯಕಿ ಐಶ್ವರ್ಯ ದೇಸಾಯಿ ಅವರಿಗೆ ನಮ್ಮನೆ ಯುವ ಪ್ರಶಸ್ತಿ ಪ್ರದಾನವಾಗಲಿದೆ. ಅಭ್ಯಾಗತರಾಗಿ ವಿ.ಉಮಾಕಾಂತ ಭಟ್ಟ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ 2025ರ ನೂತನ ಕ್ಯಾಲೆಂಡರ್ ಕೂಡ ಬಿಡುಗಡೆ ಆಗಲಿದೆ. ಎಲ್ಲ ದಾರಿಗಳೂ ನಗರ, ಮಹಾ ನಗರ ಸೇರುವ ಧಾವಂತದಲ್ಲಿ ಇವೆ. ಈ ಮಧ್ಯೆ ಸಾಮಾನ್ಯ ಹಳ್ಳಿ ಅಂಗಳದಲ್ಲಿ ಇಂತಹ ಸಾಂಸ್ಕೃತಿಕ ಹಬ್ಬ ನಡೆಸುವ ಮೂಲಕ ಹಳ್ಳಿಯ ಚೈತನ್ಯ ಹೆಚ್ಚಿಸುವ ಆಶಯ ನಮ್ಮದು ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.