ಯಲ್ಲಾಪುರ: ಪುರಾಣ ಪ್ರಸಿದ್ಧ ಕವಡಿಕೆರೆ ದುರ್ಗಾ ದೇವಿ ಸನ್ನಿಧಿಯಲ್ಲಿ ಗಂಗಾಷ್ಟಮಿ ಜಾತ್ರೆ ಅಂಗವಾಗಿ ಬಗೆ ಬಗೆಯ ಕಾರ್ಯಕ್ರಮ ನಡೆದಿದ್ದು, ಹಬ್ಬದ ವಾತಾವರಣ ಕಂಡು ಬಂದಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿ-ಕಿರಿಯರ ಸಂವಾದದ ಜೊತೆ ಸಾಧಕರಿಗೆ ಸನ್ಮಾನಿಸಿದ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು.
ಕಳೆದ ಮೂರು ವರ್ಷಗಳಿಂದ ಶ್ರೀಕ್ಷೇತ್ರ ಕವಡಿಕೆರೆಯಲ್ಲಿ ಗಂಗಾಷ್ಟಮಿ ಜಾತ್ರೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಭಾಗದಲ್ಲಿ ಸ್ಥಳೀಯ ಮುಖಂಡ ನಾಗರಾಜ ಕವಡಿಕೆರೆ ಅವರ ಮುಂದಾಳತ್ವದಲ್ಲಿ ಊರಿನವರೆಲ್ಲ ಸೇರಿ ಹಬ್ಬದ ರೀತಿ ಈ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಗುರುವಾರ ಸಂಜೆ ಆ ಭಾಗದ ಮಕ್ಕಳೆಲ್ಲರೂ ಸೇರಿ `ಕಂಸ ವಧೆ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಊರಿನ ಹಲವರು ತಮ್ಮ ಅನುಭವ ಹಂಚಿಕೊoಡರು.
ಅಗ್ಗಾಶಿಕುoಬ್ರಿ ನಾರಾಯಣ ಭಟ್ಟ, ಟಿ ಆರ್ ಹೆಗಡೆ, ರಾಘವೇಂದ್ರ ಭಟ್ಟ ಕಬ್ಬಿನಗದ್ದೆ ಸುಬ್ಬಣ್ಣ ದಾನ್ಯಾನಕೊಪ್ಪ, ವೆಂಕಟ್ರಮಣ ಭಟ್ಟ ಕಿರಕುಂಬತ್ತಿ, ಸುಬ್ಬಣ್ಣ ಉದ್ದಾಬೈಲ್, ಗಣಪತಿ ಭಟ್ಟ ಗುಡ್ಕಂಲ್ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಯಕ್ಷಗಾನ ಭಾಗವತಿಕೆಯಲ್ಲಿ ಸಾಧನೆ ಮಾಡಿದ ಮೊಟ್ಟೆಗದ್ದೆ ಗಣಪತಿ ಭಟ್ಟ, ಯೋಗಾಭ್ಯಾಸದಲ್ಲಿ ಸಾಧನೆ ಸುಬ್ರಾಯ ಭಟ್ಟ ಆನೆಜಡ್ಡಿ, ವಿಜ್ಞಾನ ಶಿಕ್ಷಣ ಕ್ಷೇತ್ರದ ಸಾಧನೆ ಮಾಡಿದ ಎಂ ರಾಜಶೇಖರ ಹಾಗೂ ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿರುವ ಸುರೇಶ ನಾಯ್ಕ ಅವರನ್ನು ಊರಿನವರು ಸನ್ಮಾನಿಸಿದರು.