ಕೃಷಿ, ಪೌರೋಹಿತ್ಯದ ಜೊತೆಗೆ ಯಕ್ಷಗಾನಗಳಲ್ಲಿ (Yakshagana) ಮದ್ದಲೆ ವಾದಕರಾಗಿ ಪರಿಚಿತರಾದವರು ಗಾಣಗದ್ದೆಯ ಚಂದ್ಗುಳಿಯ ಸುಬ್ರಾಯ ಭಟ್ಟ. ಗಾಣಗದ್ದೆ ಸುಬ್ಬಣ್ಣ ಎಂದೇ ಚಿರಪರಿಚಿತರಾಗಿರುವ ಅವರು ಯಲ್ಲಾಪುರ ತಾಲೂಕಿನ ಚಂದ್ಗುಳಿಯ ಗಾಣಗೆದ್ದೆ ನಿವಾಸಿ.
ಏಳನೇ ತರಗತಿಯವರೆಗಿನ ಶಾಲಾ ವಿದ್ಯಾಭ್ಯಾಸದ ನಂತರ ಶೃಂಗೇರಿಯಲ್ಲಿ ಕೆಲವು ಕಾಲ ಮಂತ್ರಾಭ್ಯಾಸವನ್ನು ಮಾಡಿದರು. ಬಾಲ್ಯದಿಂದಲೂ ಇದ್ದ ಯಕ್ಷಗಾನಾಸಕ್ತಿ ಅವರ ಬೆಳವಣಿಗೆಯ ಜೊತೆಯೇ ಹೆಚ್ಚಾಯಿತು. ಅದರಲ್ಲೂ ಮದ್ದಳೆ ಕಲಿಕೆಯ ಹಂಬಲ ತೀವ್ರವಾದಾಗ 1980ರಲ್ಲಿ ಕೋಟಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಯಾದರು. ನಾರ್ಣಪ್ಪ ಊಪ್ಪುರು, ದುರ್ಗಪ್ಪ ಗುಡಿಗಾರ, ಕೆ.ಪಿ ಹೆಗಡೆ, ಕವ್ವಾಳೆ ಗಣಪತಿ ಭಾಗವತರಂಥ ಮಹಾನ್ ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. ಮೂರು ವರ್ಷ ಕವ್ವಾಳೆ ಗಣಪತಿ ಭಾಗವತರು ಮತ್ತು ಶಂಕರ ಭಾಗವತರು ಶಿಕ್ಷಕರಾಗಿದ್ದ ಕವಡಿಕೆರೆಯಲ್ಲಿ ಆಯೋಜನೆಗೊಂಡಿದ್ದ ಯಕ್ಷಗಾನ ತರಗತಿಯಲ್ಲಿ ಮೂರು ತಿಂಗಳು ಮದ್ದಳೆವಾದನದ ಕುರಿತು ಅಭ್ಯಾಸ ಮಾಡಿದರು.
ನಂತರ ಚಂದಗುಳಿ, ಕವಡಿಕೆರೆ ದೇವಳಗಳಲ್ಲಿ ಮತ್ತು ಊರಿನಲ್ಲಿ ನಡೆಯುವ ಆಟ ಕೂಟಗಳಲ್ಲಿ ಭಾಗವಹಿಸುತ್ತ ಅನುಭವ ಸಂಪಾದಿಸಿದರು. ಲಕ್ಷ್ಮೀನಾರಾಯಣ ತಾಳಮದ್ದಳೆ ಕೂಟ ದೇವರಗೆದ್ದೆ, ಮಹಾಗಣಪತಿ ತಾಳಮದ್ದಳೆ ಕೂಟ ಮಾಗೋಡು ಮುಂತಾದ ತಾಳಮದ್ದಳೆ ತಂಡಗಳಲ್ಲಿ ಮದ್ದಳೆಗಾರರಾಗಿ ಭಾಗವಹಿಸಿದರು. ಯಲ್ಲಾಪುರ, ಅಂಕೋಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜರುಗುವ ಹವ್ಯಾಸಿ ಆಟಗಳಲ್ಲಿ ಅವರದ್ದು ಖಾಯಂ ಹಾಜರಾತಿ. ಇದರೊಂದಿಗೆ ಹವ್ಯಾಸಿ ಕಲಾಸಂಘಗಳಲ್ಲಿ ಶಿಕ್ಷಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.
2000ನೇ ಇಸ್ವಿಯಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ತಾಳಮದ್ದಳೆ ಸ್ಪರ್ಧೆಯ ಮದ್ದಳೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಅವರದ್ದು. ಸುಬ್ಬಣ್ಣನವರು ಭಾಗವಹಿಸಿರುವ 25ಕ್ಕೂ ಹೆಚ್ಚು ಕಾರ್ಯಕ್ರಮಗಳು ಕಾರವಾರ ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಿoದ ಪ್ರಸಾರವಾಗಿದೆ. ಹಲವಾರು ಸಂಘಸoಸ್ಥೆಗಳಿoದ ಸನ್ಮಾನಿತರಾಗಿರುವ ಸುಬ್ಬಣ್ಣ ಉತ್ತಮ ಕೃಷಿಕರುಕೂಡ ಹೌದು. ಹಿತಮಿತ ಮಾತು, ಸರಳ ನಡೆವಳಿಕೆ, ಕರ್ತವ್ಯದಲ್ಲಿರುವ ನಿಷ್ಠೆ, ಶ್ರದ್ಧೆಯ ಕಾರಣ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.
-ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ
Discussion about this post