ವೃತ್ತಿಯಲ್ಲಿ ಐತಿಹಾಸಿಕ ಕಥೆ ಹೇಳುವ ಕುಮಟಾ ಹಿತ್ತಲಮಕ್ಕಿಯ ಬೊಮ್ಮಯ್ಯ ಗಾಂವಕಾರರು ಪ್ರವೃತ್ತಿಯಲ್ಲಿ ಪೌರಾಣಿಕ ಕಥೆಗಳನ್ನು ತಿಳಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ.
ಎಂ.ಎ ಹಾಗೂ ಬಿ.ಇಡಿ ಓದಿರುವ ಅವರು ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿಹೊಂದಿದ್ದರು. ಹೀಗಾಗಿಯೇ 13ನೇ ವಯಸ್ಸಿನಲ್ಲಿ ಮನ್ಮಥನ ಪಾತ್ರದ ಮೂಲಕ ರಂಗ ಪ್ರವೇಶಿಸಿದರು. 16ನೇ ವಯಸ್ಸಿನಲ್ಲಿ ಕೃಷ್ಣ ಮಹಾಲೆ ಹಾಗೂ ಶುಕ್ರಪ್ಪ ನಾಯಕರ ನಿರ್ದೇಶನದಲ್ಲಿ ಭಾಗವತಿಕೆ ಆರಂಭಿಸಿದರು. 1984ರಲ್ಲಿ ಹಂಗಾರಕಟ್ಟೆ ಕೇಂದ್ರ ಸೇರಿ ಸದಾನಂದ ಐತಾಳ ಹಾಗೂ ಕೆ.ಪಿ.ಹೆಗಡೆಯವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದರು. ಆಕ್ಟರ್ ಜೋಶಿ, ಎಂ ಎಂ ನಾಯ್ಕ, ಸ ರಾ ನಾಯಕ ಮೊದಲಾದವರು ಅವರನ್ನು ಕೈ ಹಿಡಿದು ನಡೆಸಿದ್ದು ಅವರೆಲ್ಲರ ಮಾರ್ಗದರ್ಶನದಲ್ಲಿ ಅತ್ಯುತ್ತಮ ವೇಷಧಾರಿಯಾಗಿ ರೂಪುಗೊಂಡರು.
ಅಭಿಮನ್ಯು, ಸುಧನ್ವ, ಬಬ್ರುವಾಹನ ಮುಂತಾದ ವೇಷಗಳ ಮೂಲಕ ಬೊಮ್ಮಯ್ಯ ಗಾಂವಕಾರರು ಪ್ರಸಿದ್ಧಿಗೆ ಬಂದರು. 1982ರಲ್ಲಿಯೇ ಅವರು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು. ಚಿಟ್ಟಾಣಿ, ಗೋವಿಂದ ನಾಯ್ಕ ಮುಂತಾದ ದಿಗ್ಗಜ ಕಲಾವಿದರ ಒಡನಾಟ ಅವರಿಗೆ ಸಿಕ್ಕಿತು. ಪರಿಣಾಮ 1998ರಲ್ಲಿ ಬೆಂಗಳೂರು ದೂರದರ್ಶನದಲ್ಲಿಯೂ ಅವರ ಯಕ್ಷಗಾನ ಪ್ರಸಾರವಾಯಿತು. ನಂತರ ಕಾರವಾರ, ಧಾರವಾಡ ಆಕಾಶವಾಣಿಗಳಲ್ಲಿಯೂ ಅವರು ಕಾರ್ಯಕ್ರಮ ನೀಡಿದ್ದಾರೆ. ರಾಮನಾಥ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ 5 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯದಲ್ಲೂ ಛಾಪು ಮೂಡಿಸಿರುವ ಗಾಂವಕರರು, 2011ರ ಜನವರಿಯಲ್ಲಿ ಯಕ್ಷಗಾನದ ಕುರಿತಾದ `ಯಕ್ಷ ದೀವಿಗೆ’ ಎಂಬ ಕೃತಿ ಹೊರತಂದಿದ್ದಾರೆ. 2013ರಲ್ಲಿ ಐತಿಹಾಸಿಕ ಕಥಾ ಹಂದರವುಳ್ಳ `ಚಾಲುಕ್ಯ ವರ್ಧನ’ ಪ್ರಸಂಗ ಬಿಡುಗಡೆ ಮಾಡಿದ್ದಾರೆ. ಧಾರವಾಡ, ಬೆಳಗಾವಿ, ಉಡುಪಿ ಹಾಗೂ ಉತ್ತರಕನ್ನಡದ ಹಲವು ಕಡೆ ಈ ಪ್ರಸಂಗ ಯಕ್ಷಗಾನ ಹಾಗೂ ತಾಳಮದ್ದಲೆಯಾಗಿ ಪ್ರದರ್ಶನ ಕಂಡಿದೆ. ಜಿಲ್ಲೆಯ ಹಲವು ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಅವರು ನೀಡಿದ್ದಾರೆ. ಸದ್ಯ ವೃತ್ತಿಯಿಂದ ನಿವೃತ್ತರಾಗಿದ್ದರೂ ಪ್ರವೃತ್ತಿಯಿಂದ ಅವರು ನಿವೃತ್ತರಾಗಿಲ್ಲ.
– ಕರ್ನಾಟಕ ಕಲಾ ಸನ್ನಿಧಿ