ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಕುಣಿದವರಿಂದ ಪ್ರೇರಣೆಗೆ ಒಳಗಾಗಿ ಯಕ್ಷರಂಗ ಪ್ರವೇಶಿಸಿದವರು ಯಲ್ಲಾಪುರದ ಕವಡಿಕೆರೆ ಸಮೀಪದ ಹುಲಿಮನೆ ಗಣಪತಿ ಭಟ್ಟರು.
ಇನ್ನೊಬ್ಬರ ವೇಷ, ಕುಣಿತ ನೋಡಿಯೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಹೆಜ್ಜೆ, ತಾಳ ತಿಳಿಯದೇ ಇದ್ದರೂ ಅದರ ಕಲಿಕೆಗಾಗಿ ಯಕ್ಷರಂಗ ಪ್ರವೇಶಿಸಿದರು. ಹಿತ್ಲಕಾರ ಗದ್ದೆ ಶಾಲೆಯಲ್ಲಿ 4ನೇ ತರಗತಿಯವರೆಗೆ ಓದಿ ನಂತರ ನಂದೂಳ್ಳಿಯಲ್ಲಿ ಮಂತ್ರಭಾಗ ಕಲಿತ ಅವರು ಮುಂದೆ ತಂದೆ ವೆಂಕಟ್ರಮಣ ಭಟ್ಟ ಅವರೊಂದಿಗೆ ಯಕ್ಷಗಾನ-ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುರು ಮಾಡಿದ್ದರು. ಕವಡಿಕೆರೆ ದೇವಸ್ಥಾನದಲ್ಲಿ ನಡೆಯುವ ತಾಳಮದ್ದಲೆಗಳಲ್ಲಿ ವೆಂಕಟ್ರಮಣ ಭಟ್ಟರು ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು. ಹೀಗಾಗಿ ಸಹಜವಾಗಿ ಗಣಪತಿ ಭಟ್ಟ ಅವರಿಗೂ ಯಕ್ಷಗಾನದ ಬಗ್ಗೆ ಭಕ್ತಿ ಮೂಡಿತು.
ಕಲಾವಿದರಾಗುವ ಬಯಕೆಯೊಂದಿಗೆ ಗುಂಡಬಾಳಾ ಮೇಳಕ್ಕೆ ಸೇರಿದರು. ಹಿರಿಯ ಕಲಾವಿದರಿಂದ ವಿವಿಧ ವಿಷಯ ಕೇಳಿ ತಿಳಿದು ವೇಷ ಮಾಡಲು ಆರಂಭಿಸಿದರು. ಗುಂಡಬಾಳಾ ಮೇಳ ಸೇರಿದ ಮೊದಲ ವರ್ಷ ಪೀಠಿಕಾ ಸ್ತ್ರೀ ವೇಷ ಧರಿಸಿದರು. ಆದರೆ ಅವರಿಗೆ ವೇಷ ಧರಿಸಲು ಬರುತ್ತಿರಲಿಲ್ಲ. ಆಗ ಆ ಮೇಳದಲ್ಲಿದ್ದ ಪ್ರಸಿದ್ಧ ಚಂಡೆವಾದಕ ದಿ ಕೃಷ್ಣಯಾಜಿ ಇಡಗುಂಜಿ ನೆರವಾಗಿದನ್ನು ಗಣಪತಿ ಭಟ್ಟರು ಸ್ಮರಿಸುತ್ತಾರೆ.
ಗುಂಡಬಾಳಾ ಮೇಳದಲ್ಲಿ 3 ವರ್ಷದ ಸೇವೆಯ ನಂತರ ನಾಗರಕೂಡಿಗೆ, ಮೇಗರವಳ್ಳಿ, ಬಗ್ವಾಡಿ ಮುಂತಾದ ಬಯಲಾಟ ಮೇಳಗಳಲ್ಲಿ ತಿರುಗಾಟ ನಡೆಸಿದರು. ಬಚ್ಚಗಾರು ಬಯಲಾಟ ಹಾಗೂ ಟೆಂಟ್ ಮೇಳ, ಶಿರಸಿ ಮೇಳಗಳಲ್ಲಿಯೂ ಕಲಾ ಸೇವೆ ಮಾಡಿದರು. 30 ವರ್ಷಕ್ಕೂ ಹೆಚ್ಚು ಕಾಲ ಮೇಳದ ತಿರುಗಾಟ ನಡೆಸಿರುವ ಗಣಪತಿ ಭಟ್ಟ ಅವರು ನಂತರ ಮನೆಗೆ ಮರಳಿದ್ದು, ಇದೀಗ ಕವಡಿಕೆರೆ, ಅಣಲಗಾರ, ಬಿಲ್ಲಿಗದ್ದೆ ಮೊದಲಾದ ಕಡೆ ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ಕುಣಿಯುತ್ತಾರೆ.
ಮೇಳದ ತಿರುಗಾಟದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ತೆಕ್ಕಟ್ಟೆ ಆನಂದ ಮಾಸ್ತರ್, ಕೋಟ ವೈಕುಂಠ, ಎಂ ಎ.ನಾಯ್ಕ, ಕಣ್ಣಿಮನೆ ಗಣಪತಿ ಭಟ್ಟ, ಕೇಶವ ಹೆಗಡೆ ಕೊಳಗಿ, ಶಂಕರ ಭಾಗ್ವತ, ಗಣಪತಿ ಭಾಗ್ವತ ಕವಾಳೆ ಸೇರಿ ಅನೇಕ ದಿಗ್ಗಜರ ಜೊತೆ ಒಡನಾಟ-ಓಡಾಟ ಹೊಂದಿದ್ದರು. ಅವರೆಲ್ಲರ ಮಾರ್ಗದರ್ಶನದಿಂದ ಎಲ್ಲಾ ರೀತಿಯ ಪಾತ್ರಗಳನ್ನು ಗಣಪತಿ ಭಟ್ಟರು ನಿಭಾಯಿಸಿದ್ದಾರೆ.
ಕೆಲವೊಮ್ಮೆ ಚಿಟ್ಟಾಣಿಯವರೂ ತಮ್ಮ ಪಾತ್ರದ ಮೊದಲರ್ಧ ಭಾಗವನ್ನು ಗಣಪತಿ ಭಟ್ಟರಿಂದ ಮಾಡಿಸಿ, ಪ್ರೋತ್ಸಾಹ ನೀಡುತ್ತಿದ್ದರು. `ಅಂತಹ ಶ್ರೇಷ್ಠ ಕಲಾವಿದರ ಮಾರ್ಗದರ್ಶನ, ಒಡನಾಟ ದೊರೆತದ್ದು ಸದಾ ಸ್ಮರಣೀಯ’ ಎಂದು ಮೇಳದ ದಿನಗಳನ್ನು ಅವರು ಮೆಲುಕು ಹಾಕಿದರು. ಪ್ರತಿ ಬಾರಿ ಮೇಳದ ತಿರುಗಾಟದ ಆರಂಭದಿAದ ಕೊನೆಯವರೆಗೂ ಒಂದೂ ರಜೆ ಮಾಡದೇ ಇರುವುದು ಗಣಪತಿ ಭಟ್ಟರ ವಿಶೇಷತೆಗಳಲ್ಲಿ ಒಂದು.
*ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ