ಎಸ್.ಎನ್.ಹೆಗಡೆ ಕುಂಟೆಮನೆ ಮನೆ ಅವರು ತಮ್ಮ ಧ್ವನಿಯಲ್ಲಿ ಗದಾಯುದ್ಧ, ಕಾಲನೇಮಿಕಾಳಗ, ಕಾರ್ತವೀರ್ಯಾರ್ಜುನ, ಭೀಷ್ಮಾರ್ಜುನ ಮೊದಲಾದ ಪ್ರಸಂಗದ ಪದ್ಯ ಹೇಳಿದರೆ ಎಂಥವರೂ ಸಹ ಒಮ್ಮೆ ಕಿವಿಯಾಗುತ್ತಾರೆ. ನಿದ್ದೆಯಲ್ಲಿದ್ದವರು ಸಹ ಉಮೇದಿಯಿಂದ ಎದ್ದು ಕುಳಿತು ಅವರ ಧ್ವನಿ ಆಲಿಸುತ್ತಾರೆ. ಅಂಥ ಕಂಠತ್ರಾಣದ ಭಾಗವತರಿವರು. ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಕುಂಟೆಮನೆಯವರಾದ ಅವರು ಜೀವನಾಧಾರ ಕೃಷಿಯಾದರೂ ಯಕ್ಷಗಾನ (Yakshagana) ಅವರಿಗೆ ಪ್ರಪಂಚ!
ಸoಗೀತ ಮತ್ತು ಯಕ್ಷಗಾನದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದ ಮಾಗೋಡಿನ ದೇಸಾಯಿಮನೆಯ ನಾರಾಯಣ ತಿಮ್ಮಣ್ಣ ದೇಸಾಯಿ ಅವರಿಂದ ಭಾಗವತಿಕೆಯ ತರಬೇತಿ ಪಡೆದ ಇವರು ಯಲ್ಲಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ತಾಳಮದ್ದಳೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾರೆ.
ಉತ್ಸಾಹಿ ಸ್ಥಳೀಯ ಕಲಾವಿದರು ಒಟ್ಟಾಗಿ `ಮಹಾಗಣಪತಿ ಯಕ್ಷಗಾನ ಮಂಡಳಿ ಮಾಗೋಡ’ ಎಂಬ ಹೆಸರಿನ ಮೇಳದಲ್ಲೂ ಭಾಗವತರಾಗಿ ಸೇವೆ ಮಾಡಿದ್ದಾರೆ. 1988ರಿಂದ 2002ವರೆಗೆ ನಿರಂತರವಾಗಿ ಧಾರವಾಡ, ಕಾರವಾರ, ಮಂಗಳೂರು ಆಕಾಶವಾಣಿಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿದೆ. 50 ವರ್ಷಕ್ಕೂ ಮಿಕ್ಕಿದ ಸುದೀರ್ಘ ಅವಧಿಯಿಂದ ಕಲಾಸೇವೆಯಲ್ಲಿದ್ದಾರೆ.
ಯಕ್ಷಗಾನಕ್ಕಾಗಿಯೇ ಹೇಳಿ ಮಾಡಿಸಿದಂತಿರುವ ಸ್ವರ ಹೊಂದಿರುವ ಹೆಗಡೆಯವರು ಕಡತೋಕ ಮಂಜನಾಥ ಭಾಗವತರಿಂದ ತುಂಬಾ ಪ್ರಭಾವಿತರಾದವರು. ಕಡತೋಕರ ಕಟ್ಟಾ ಅಭಿಮಾನಿ. ಅವರ ಕುರಿತು ಅಪಾರ ಭಕ್ತಿ. ತಾಳಮದ್ದಳೆ ಕಾರ್ಯಕ್ರಮಗಳಿಗೆ ಯಲ್ಲಾಪುರಕ್ಕೆ ಬರುತ್ತಿದ್ದ ಕಡೋತಕರಲ್ಲಿ `ನಾನು ತಮ್ಮಲ್ಲಿಗೆ ಬರುತ್ತೆನೆ ನನಗೆ ಪಾಠಮಾಡಿ’ ಎಂದು ಕೇಳಿಕೊಂಡಾಗ `ನಾನು ನಿರಂತರ ತಿರುಗಾಟದಲ್ಲಿ ಇರುವ ಕಾರಣ ನನಗೆ ಪಾಠ ಮಾಡಲೂ ಬಿಡುವು ಸಿಗದು’ ಎಂಬ ಉತ್ತರ ಬಂತು. ಆ ಉತ್ತರದಿಂದ ನಿರಾಶರಾಗದೇ ಮನಸ್ಸಿನಲ್ಲೇ ಕಡತೋಕರನ್ನು ಗುರುವೆಂದು ಭಾವಿಸಿ ಏಕಲವ್ಯನಂತೆ ಸಾಧನೆಗೆ ತೊಡಗಿದವರು. ಕೇವಲ ದೈವಿದತ್ತ ಕಂಠಮಾತ್ರ ಇವರ ಬಂಡವಾಳ ಅಲ್ಲ. 30ಕ್ಕೂ ಹೆಚ್ಚು ಪ್ರಸಂಗ ಬಾಯಿಪಾಠ. ಉತ್ತಮ ತಾಳಹಿಡಿತ, ತಕ್ಕಷ್ಟು ರಾಗ ಜ್ಞಾನ, ಮುಖ್ಯವಾಗಿ ಬಹು ಚೆನ್ನಾದ ಅರ್ಥ ಜ್ಞಾನ ಹೊಂದಿರುವುದು ಅವರ ಶಕ್ತಿ.
`ಯಕ್ಷಗಾನದಲ್ಲಿ ತುಂಬಾ ಎತ್ತರದ ಸ್ಥಾನ ಹೊಂದಲು ಬೇಕಾದ ಎಲ್ಲಾ ಅರ್ಹತೆಗಳಿದ್ದರೂ, ಆಗ ಮನೆಯಲ್ಲಿನ ಬಡತನ ತಿರುಗಾಟಕ್ಕೆ ಅವಕಾಶ ಕೊಡಲಿಲ್ಲ’ ಎಂಬ ನೋವು ಅವರದ್ದು.
– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ
Discussion about this post