ಪಟ್ಟಣದಲ್ಲಿ ನಿರ್ಮಿಸಿದ ಮೀನು ಹಾಗೂ ಮಾಂಸ ಮಾರುಕಟ್ಟೆ ಟೆಂಡರ್ ಅವಧಿ ಮುಗಿದು ವರ್ಷ ಕಳೆದಿದೆ. ಅದಾಗಿಯೂ, ಪಟ್ಟಣ ಪಂಚಾಯತ ಮತ್ತೆ ಟೆಂಡರ್ ಕರೆದಿಲ್ಲ. ಹೀಗಿದ್ದರೂ ಮೀನು ಮತ್ತು ಮಾಂಸ ಮಾರುಕಟ್ಟೆಯಲ್ಲಿ ವ್ಯಾಪಾರ ಎಂದಿನoತಿದ್ದು, ಅದರ ಬಾಡಿಗೆ ಹಣ ಯಾರ ಪಾಲಾಯಿತು? ಎಂಬುದು ಯಾರಿಗೂ ಗೊತ್ತಿಲ್ಲ!
ಸಮಯಕ್ಕೆ ಸರಿಯಾಗಿ ಮೀನು ಮಾರುಕಟ್ಟೆ ಟೆಂಡರ್ ಕರೆಯದ ಕಾರಣ ಪಟ್ಟಣ ಪಂಚಾಯತಗೆ ಸರಿಸುಮಾರು 5 ಲಕ್ಷ ರೂ ಹಾನಿಯಾಗಿದೆ. 2025ರ ಮಾರ್ಚ 23ರಂದು ಮೀನು ಮಾರುಕಟ್ಟೆ ಟೆಂಡರ್ ಮಾಡಲು ನಿರ್ಧರಿಸಲಾಗಿದ್ದರೂ ಅದನ್ನು ಏಕಾಏಕಿ ರದ್ದು ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. `ಈ ಅಕ್ರಮದಲ್ಲಿ ಪ ಪಂ ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂದು ಪ ಪಂ ಸದಸ್ಯರೂ ಆಗಿರುವ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ದೂರಿದ್ದಾರೆ.
`ಒಂದು ವರ್ಷದ ಅವಧಿ ಮುಗಿದ ನಂತರ ಮೀನು ಮತ್ತು ಮಾಂಸ ಮಾರುಕಟ್ಟೆ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ನಿಯಮಾನುಸಾರ ಹರಾಜು ನಡೆದಿಲ್ಲ. ಅದಾಗಿಯೂ, ಈ ಹಿಂದೆ ಹರಾಜಿನಲ್ಲಿ ಮಳಿಗೆ ಪಡೆದವರೇ ಆ ಜಾಗದಲ್ಲಿ ಮುಂದುವರೆದಿದ್ದಾರೆ. ಪಟ್ಟಣ ಪಂಚಾಯತಗೆ ಅಲ್ಲಿನ ಬಾಡಿಗೆ ಸಹ ಪಾವತಿ ಆಗಿಲ್ಲ’ ಎಂದು ಸೋಮೇಶ್ವರ ನಾಯ್ಕ ವಿವರಿಸಿದರು.
ವಸತಿ ಯೋಜನೆಯಲ್ಲಿಯೂ ಅಪರಾತಪರ!
ಕೊಳಚೆ ನಿರ್ಮೂಲನಾ ಮಂಡಳಿಯಿoದ ವಸತಿರಹಿತರಿಗೆ ನಿವೇಶನ ನೀಡುವುದಕ್ಕಾಗಿ ಮಂಜುನಾಥ ನಗರದಲ್ಲಿ ಮನೆ ನಿರ್ಮಿಸಲಾಗಿದೆ. 300ಕ್ಕೂ ಅಧಿಕ ಮನೆ ನಿರ್ಮಿಸಲಾಗಿದ್ದು, ವಸತಿರಹಿತರಿಂದ ಈಗಾಗಲೇ 50 ಸಾವಿರ ರೂ ಹಣವನ್ನು ಪಡೆಯಲಾಗಿದೆ. ಆದರೆ, ಈವರೆಗೂ ಮನೆಗಳ ಹಂಚಿಕೆ ನಡೆದಿಲ್ಲ. `ವಸತಿರಹಿತರಿಗೆ ಮನೆ ನೀಡುವ ವಿಷಯದಲ್ಲಿಯೂ ರಾಜಕೀಯ ನಡೆದಿದೆ. ಮುಂದಿನ ಚುನಾವಣೆಯ ಪ್ರಚಾರಕ್ಕಾಗಿ ಇದನ್ನು ಬಳಸಿಕೊಳ್ಳುವುದಕ್ಕಾಗಿ ಈವರೆಗೂ ಮನೆಗಳ ಹಂಚಿಕೆ ನಡೆದಿಲ್ಲ’ ಎಂದು ಸೋಮೇಶ್ವರ ನಾಯ್ಕ ಆರೋಪಿಸಿದ್ದಾರೆ.
ಇದರೊಂದಿಗೆ `ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿ ಟೆಂಡರ್ ನಡೆದು ಐದು ತಿಂಗಳಾದರೂ ಕೆಲಸ ಶುರುವಾಗಿಲ್ಲ. ಪ ಪಂ ಅಧಿಕಾರಿಗಳ ಬೇಜವಬ್ದಾರಿಯಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಹಿರಿಯ ಅಧಿಕಾರಿಗಳು ಇದನ್ನು ಗಮನಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.