ಯಲ್ಲಾಪುರದ ನಂದೂಳ್ಳಿಯ ಮಹಾಬಲೇಶ್ವರ ಭಟ್ಟ ಹೇಳಿಕೊಳ್ಳುವಷ್ಟು ಸಿರವಂತರಲ್ಲ. ಆದರೂ, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಬೇಕು ಎಂಬ ಮನಸಿದ್ದವರು. ಹೀಗಾಗಿ ಆಗಾಗ ಒಂದೊoದು ಸೇವಾ ಚಟುವಟಿಕೆಗಳನ್ನು ಅವರು ನಡೆಸುತ್ತ ಬಂದಿದ್ದಾರೆ.
ಒಟ್ಟಿನಲ್ಲಿ ಹುಟ್ಟಿನಿಂದಲೇ ದಿವ್ಯಾಂಗ್ಯವಾಗಿರುವ ಮಹಾಬಲೇಶ್ವರ ಭಟ್ಟ ಅವರು ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಸಮರ್ಪಿಸಿ, ಸಮಾಧಾನ ಪಡುವ ಸ್ವಭಾವದವರಾಗಿದ್ದಾರೆ. ಪ್ರಸ್ತುತ ಡಿಜಿಟಲ್ ಸೇವಾ ಕೇಂದ್ರ ನಡೆಸುತ್ತಿರುವ ಮಹಾಬಲೇಶ್ವರ ಭಟ್ಟ ಬೆಳಶೇರ ಅವರು ನಂದೊಳ್ಳಿ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳ ಮೇಲೆ ಪಾಲಕರಿಗಿದ್ದ ಹೊರೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ. ತಮ್ಮ ಅಂಗವೈಕಲ್ಯತೆಯನ್ನು ಸವಾಲಾಗಿ ಸ್ವೀಕರಿಸಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು, ಸೇವಾ ಮನೋಭಾವದಿಂದ ಅವರು ಜನಮೆಚ್ಚುಗೆಗಳಿಸಿದ್ದಾರೆ.
ಮೊದಲು ಯಲ್ಲಾಪುರದಲ್ಲಿ ಎಸ್.ಟಿ.ಡಿ ಬೂತ್ ನಡೆಸಿ ನಂತರ ಬೆಂಗಳೂರಿನಲ್ಲಿ ಉದ್ಯೋಗಸ್ಥರಾಗಿದ್ದ ಮಾಚಣ್ಣ ನಾಲ್ಕು ವರ್ಷಗಳ ಹಿಂದೆ ಊರಿಗೆ ಮರಳಿ, ನಂದೊಳ್ಳಿಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಆರಂಭಿಸಿದರು. ಅಲ್ಲಿನ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಪ್ರತಿ ವರ್ಷ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. `ಅಷ್ಟರ ಮಟ್ಟಿಗಾದರೂ ಪಾಲಕರ ಆರ್ಥಿಕ ಹೊರೆಯನ್ನು ತಗ್ಗಿಸಿದ ಸಮಾಧಾನ, ಸಾರ್ಥಕತೆ ನನ್ನದಾಗುತ್ತದೆ’ ಎಂಬುದು ಮಾಚಣ್ಣ ಅವರ ಮಾತು.
ಈ ಬಾರಿ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆ, ನಂದೊಳ್ಳಿ ಪ್ರಾಥಮಿಕ ಶಾಲೆ, ಸೂಳಗಾರ, ಮಾಗೋಡ ಕಾಲೋನಿ, ಬಲೇಕಣಿ, ಹಿತ್ತಲಕಾರಗದ್ದ, ಹುಬ್ನಳ್ಳಿ ಶಾಲೆಗಳ ಒಟ್ಟು 100 ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದ್ದಾರೆ. `ಪಟ್ಟಿ-ಪೆನ್ನು ಏನು ಯಾರು ಬೇಕಾದರೂ ಕೊಡಬಹುದು’ ಎನ್ನುವವರು ಹಲವರು. ಆದರೆ, ಅಂಥಹುದನ್ನು ಕೊಡಲು ಮುಂದೆ ಬರುವವರು ಅಪರೂಪ. ಅದರಲ್ಲಿಯೂ ನೂರಾರು ಮಕ್ಕಳಿಗೆ ಪ್ರತಿ ವರ್ಷ ಶೈಕ್ಷಣಿಕ ಕೊಡುಗೆ ನೀಡುವ ಮಾಚಣ್ಣನಂಥ ಮನಸ್ಸು ಇರುವವರು ತೀರಾ ಅಪರೂಪ. ಇನ್ನೂ ಬಹುಮುಖ ಪ್ರತಿಭೆಯ ಮಾಚಣ್ಣ ಹವ್ಯಾಸಿಯಾಗಿ ಯಕ್ಷಗಾನ ಭಾಗವತಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸ್ಥಳೀಯವಾಗಿ ನಡೆಯುವ ಯಕ್ಷಗಾನ ತಾಳಮದ್ದಲೆ, ಗಾನ ವೈಭವಗಳಲ್ಲಿ ಭಾಗವತಿಕೆಯ ಮೂಲಕ ಗಮನ ಸೆಳೆದಿದ್ದಾರೆ.
– ಶ್ರೀಧರ ವೈದಿಕ
Discussion about this post