ಹವ್ಯಾಸಿ ಕಲಾವಿದರ ಪಾರುಪತ್ಯ | ಪ್ರಸಂಗ ಪಂಚಕಕ್ಕೆ ದಿನಗಣನೆ | ಸಹಬಾಳ್ವೆಗೆ ವೀರಾಂಜಿನೇಯನ ಸಹಕಾರ
ಯಲ್ಲಾಪುರ: ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17ರಂದು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಿರಂತರವಾಗಿ ತಾಳಮದ್ದಲೆಯ ಮೂಲಕ ಆಷಾಢ ಏಕಾದಶಿಯ ಪರ್ವಕಾಲದಲ್ಲಿ ಕಲಾರಾಧನೆ ನಡೆಯಲಿದೆ.
ಸ್ಥಳೀಯ ಹವ್ಯಾಸಿ ಕಲಾವಿದರೆಲ್ಲರೂ ಒಗ್ಗಟ್ಟಿನಿಂದ ಸೇರಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರತಿ ಏಕಾದಶಿಯ ದಿನ ಮಾಗೋಡಿನ ವೀರಮಾರುತಿಯ ಸನ್ನಿಧಿಯಲ್ಲಿ ತಾಳಮದ್ದಲೆ ನಡೆಯುತ್ತದೆ. ಈ ತಂಡ ತಾಲೂಕಿನ ವಿವಿಧ ಕಡೆ ತಾಳಮದ್ದಲೆ ನಡೆಸಿದ್ದು, ಕಳೆದ ವರ್ಷದಿಂದ ಆಷಾಢ ಏಕಾದಶಿಯ ದಿನ `ಪ್ರಸಂಗ ಪಂಚಕ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಕಲಾ ಆರಾಧನೆ ನಡೆಯುತ್ತಿದೆ. ಈ ಬಾರಿ `ಕಚ-ದೇವಯಾನಿ, ಪಾದುಕಾ ಪ್ರದಾನ, ರುಕ್ಮಿಣಿ ಕಲ್ಯಾಣ, ಬಬ್ರುವಾಹನ ಹಾಗೂ ಮೀನಾಕ್ಷಿ ಕಲ್ಯಾಣ’ ತಾಳಮದ್ದಲೆಗಳು ನಡೆಯಲಿವೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಕಲಾವಿದರು ಈ ಸೇವೆಯಲ್ಲಿ ಭಾಗವಹಿಸಲಿದ್ದಾರೆ. ಆಷಾಢ ಏಕಾದಶಿಯ ಪರ್ವಕಾಲದಲ್ಲಿ ದೇವರ ಸನ್ನಿಧಿಯಲ್ಲಿ ಕಲಾಭಿಮಾನಿಗಳಿಗೆ ನಿರಂತರವಾಗಿ ಲಘು ಉಪಾಹಾರ, ಪಾನೀಯ ವ್ಯವಸ್ಥೆ ನೀಡಿ ಪ್ರದರ್ಶನ ನೀಡುವುದು ಈ ಸಂಘಟನೆಯ ಮುಖ್ಯ ಉದ್ದೇಶ.
ಕಳೆದ ವರ್ಷ ಆಷಾಢ ಏಕಾದಶಿಯಂದು ಹೊಸ ಕಲ್ಪನೆಯೊಂದಿಗೆ ಆರಂಭವಾದ ಪ್ರಸಂಗ ಪಂಚಕ ಕಾರ್ಯಕ್ರಮ ಅಪಾರ ಮೆಚ್ಚುಗೆಗಳಿಸಿತ್ತು. ಮಾಗೋಡ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ನಿರಂತರ 12 ತಾಸುಗಳ ತಾಳಮದ್ದಲೆಯನ್ನು ಯಶಸ್ವಿಗೊಳಿಸಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಸಮಯ ಪಾಲನೆ ಪ್ರಸಂಗ ಪಂಚಕದ ವೈಶಿಷ್ಟ್ಯ. ನಿಗದಿತ ಸಮಯಕ್ಕೆ ಆರಂಭವಾಗಿ, ನಿಗದಿತ ಸಮಯಕ್ಕೆ ಕಾರ್ಯಕ್ರಮ ಮುಕ್ತಾಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿ ಪ್ರಸಂಗಕ್ಕೂ ನಿರ್ದಿಷ್ಟ ಸಮಯ, ಅದೇ ಸಮಯಕ್ಕೆ ಸರಿಯಾಗಿ ಪ್ರಸಂಗ ಪೂರ್ಣಗೊಳಿಸುವುದು, ಅದಕ್ಕೆ ಅಗತ್ಯ ಸಿದ್ಧತೆಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುವ ಈ ಸಂಘಟನೆ ಇತರರಿಗೆ ಮಾದರಿಯಾಗಿದೆ.
ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ, ಸಂಚಾಲಕ ನರಸಿಂಹ ಭಟ್ಟ ಕುಂಕಿಮನೆ, ಭಾಗವತ ಮಹಾಬಲೇಶ್ವರ ಭಟ್ಟ ಬೆಳಶೇರ ಅವರ ನೇತೃತ್ವದಲ್ಲಿ ಕೂಟದ ಕಲಾವಿದರು ಸಂಘಟನೆಯಲ್ಲಿ ನಿರತರಾಗಿದ್ದಾರೆ.
Discussion about this post