ಯಲ್ಲಾಪುರದ ನಂದೂಳ್ಳಿಯಲ್ಲಿ ಕಲಿಯುವ ಮಕ್ಕಳು ತಮ್ಮ ಜನ್ಮದಿನದಂದು ಪಾಲಕರ ಜೊತೆ ಶಾಲೆಗೆ ಬರಬೇಕು. ಬರುವಾಗ ಗಿಡವೊಂದನ್ನು ತಂದು, ಅದನ್ನು ನೆಟ್ಟು ನೀರುಣಿಸಬೇಕು!
ಮಕ್ಕಳಲ್ಲಿ ಸಂಸ್ಕಾರ ಹಾಗೂ ಪರಿಸರ ಪ್ರಜ್ಞೆ ಕಾಪಾಡಲು ನಂದೂಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂಥಹೊAದು ನಿಯಮ ಪಾಲಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬದ ದಿನ ಇಲ್ಲಿ ಗಿಡ ನೆಡಲಾಗುತ್ತದೆ. ಆ ಗಿಡವನ್ನು ಸಂರಕ್ಷಿಸುವ ಹೊಣೆಯನ್ನು ಸಹ ಆಯಾ ವಿದ್ಯಾರ್ಥಿಗಳೇ ನೋಡಿಕೊಳ್ಳುವುದು ಇನ್ನೊಂದು ವಿಶೇಷ. ಕಳೆದ ಐದು ವರ್ಷಗಳಿಂದ ಇಲ್ಲಿ `ಗಿಡ ನೆಡುವ ನಿಯಮ’ ಜಾರಿಯಲ್ಲಿದೆ. ಶಿಕ್ಷಕರ ವಿಶೇಷ ಆಸಕ್ತಿಯಿಂದ ಇದು ಯಶಸ್ವಿಯಾಗಿ ಅನುಷ್ಠಾನವೂ ಆಗಿದೆ.
ಹುಟ್ಟುಹಬ್ಬದ ಹೆಸರಿನಲ್ಲಿ ಆಡಂಬರ, ಅದ್ಧೂರಿ ಆಚರಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯೋಚಿಸಿದ ಶಾಲಾ ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ ಈ ಬಗ್ಗೆ ಪಾಲಕರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪರಿಸರ ಸೇವೆ ಮಾಡುವ ನಿಟ್ಟಿನಲ್ಲಿ ಯೋಚಿಸಿದ ಅವರು ಗಿಡ ನೆಡುವ ಬಗ್ಗೆ ಮಾತನಾಡಿದರು. ಇದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಿ, ಒಪ್ಪಿಗೆ ಸೂಚಿಸಿದರು.
ಇದೀಗ ಮಕ್ಕಳ ಜನ್ಮದಿನದಂದು ಶಾಲೆಗೆ ಮಕ್ಕಳು ಬರುತ್ತಾರೆ. ಅವರೇ ಗಿಡ ತರುತ್ತಾರೆ. ಯೋಗ್ಯ ಸ್ಥಳದಲ್ಲಿ ಗುಂಡಿ ತೋಡಿ, ಅಲ್ಲಿ ಗಿಡವನ್ನು ನೆಟ್ಟು ಮಕ್ಕಳ ಕೈಯಿಂದ ನೀರುಣಿಸುತ್ತಾರೆ. ಅದಾದ ನಂತರ ನಿತ್ಯ ಆ ಗಿಡಗಳ ಆರೈಕೆಯ ಹೊಣೆ ಮಕ್ಕಳಿಗೆವಹಿಸುತ್ತಾರೆ. `ಗಿಡವೊಂದನ್ನು ನೆಟ್ಟು ಬೆಳೆಸಿದರೆ ಜನ್ಮದಿನದ ಆಚರಣೆ ಸಾರ್ಥಕ’ ಎಂದು ಮಕ್ಕಳ ಮನಸ್ಸಿಗೂ ಅನಿಸಿತು. ಹಿರಿಯ ವಿದ್ಯಾರ್ಥಿಗಳು ಹಾಕಿಕೊಟ್ಟ ಪರಂಪರೆಯನ್ನು ಉಳಿದವರು ಪಾಲಿಸುತ್ತಿದ್ದು, ಶಾಲೆಯ ಸುತ್ತಲಿನ ವಾತಾವರಣ ಹಸಿರಾಗಿದೆ.
- ಶ್ರೀಧರ ವೈದಿಕ
Discussion about this post