ಯಲ್ಲಾಪುರ: `ಪಟ್ಟಣದ ವಿಶ್ವದರ್ಶನ (Vishwadarshana) ಶಿಕ್ಷಣ ಸಂಸ್ಥೆ ಎದುರಿನಲ್ಲಿ ಅಪಘಾತದ ಪ್ರಮಾಣ ಹೆಚ್ಚಿದ್ದು, ಇಲ್ಲಿನ ಅಪಾಯ ತಪ್ಪಿಸಿ’ ಎಂದು ಪ.ಪಂ.ಸದಸ್ಯ ನಾಗರಾಜ ಅಂಕೋಲೆಕರ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಪಿಸೈ ಸಿದ್ದಪ್ಪ ಗುಡಿ ಅವರನ್ನು ಭೇಟಿ ಮಾಡಿದ ಅವರು `ಶಾಲೆ ಆರಂಭ ಮತ್ತು ಬಿಡುವ ವೇಳೆ ಹೆದ್ದಾರಿಯಲ್ಲಿ ಪಾಲಕರು, ಮಕ್ಕಳು ಹೆಚ್ಚಿಗೆ ಜಮಾಯಿಸುತ್ತಾರೆ. ಇದರಿಂದ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿನ ಮಕ್ಕಳನ್ನು ಅವರ ಪಾಲಕರು ತಮ್ಮ ವಾಹನಗಳ ಮೇಲೆ ಕರೆತಂದು ಶಾಲೆಯ ಗೇಟ್ ಬಳಿ ಬಿಡುತ್ತಿದ್ದು, ಈ ವೇಳೆ ಅವಘಡ ನಡೆಯುವ ಸಾಧ್ಯತೆಗಳಿದೆ. ಹೆಚ್ಚಿನ ಜನ ಜಮಾಯಿಸುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತದೆ. ಮಕ್ಕಳಿಗೆ, ಪಾಲಕರಿಗೆ ಅಪಘಾತಗಳು ಉಂಟಾದ ನಿದರ್ಶನಗಳಿವೆ’ ಎಂದು ವಿವರಿಸಿದರು.
`ಅವಘಡಗಳನ್ನು ತಪ್ಪಿಸಲು ಪಾಲಕರ ವಾಹನಗಳನ್ನೂ ಸಂಸ್ಥೆಯ ಒಳಗೆ ಪ್ರವೇಶಿಸಲು ಅವಕಾಶ ಕೊಡಬೇಕು. ಸಂಸ್ಥೆಯ ಆವರಣದಿಂದಲೇ ಮಕ್ಕಳನ್ನು ಕರೆದೊಯ್ಯುವ, ಕಳುಹಿಸುವ ಅವಕಾಶ ಮಾಡಿಕೊಡಲು ಸಂಸ್ಥೆಯವರಿಗೆ ಸೂಚನೆ ನೀಡಬೇಕು’ ಎಂದು ಆಗ್ರಹಿಸಿದರು. `ಇದರೊಂದಿಗೆ ಸಮೀಪದಲ್ಲಿರುವ ಹೋಟೆಲ್’ಗೆ ಆಗಮಿಸುವ ವಾಹನಗಳ ಮೇಲೆಯೂ ನಿಗಾ ಇಡಬೇಕು’ ಎಂದು ಒತ್ತಾಯಿಸಿದರು.
Discussion about this post