ಯಲ್ಲಾಪುರ: ‘ದೇಶಭಕ್ತರೆಲ್ಲ ಸೇರಿ ವಜ್ರಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಕೆಲವರು ಅದಕ್ಕೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವೀರಸಾವರ್ಕರ್ ಪ್ರತಿಮೆ ಅನಾವರಣಕ್ಕೆ ವಜ್ರಳ್ಳಿಯ ಮನೆ ಮನೆಗೆ ತೆರಳಿ ಜನಾಭಿಪ್ರಾಯ ಪಡೆಯಲಾಗಿದೆ. ಆದರೆ, ದೇಶ ವಿರೋಧಿ ಮಾನಸಿಕತೆ ಹೊಂದಿದ ಕಾಂಗ್ರೆಸ್ಸಿಗರು ಇದಕ್ಕೆ ವಿರೋಧಿಸುತ್ತಿದ್ದಾರೆ. ಬಿಜೆಪಿ ಮಂಡಳ ವೀರ ಸಾವರ್ಕರ್ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದ್ದು, ಗ್ರಾಮಸ್ಥರು ನಿರ್ಣಯಿಸಿದ ಸ್ಥಳದಲ್ಲಿಯೇ ಪ್ರತಿಮೆ ಸ್ಥಾಪನೆಯ ಹೋರಾಟಕ್ಕೆ ಬದ್ಧ’ ಎಂದರು
‘ಒಂದು ವರ್ಷದಿಂದ ಪುತ್ಥಳಿ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದ್ದು, ಸೋಂದಾ ಸ್ವರ್ಣವಲ್ಲಿ ಶ್ರೀಗಳು ಸಹ ಇದಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಗ್ರಾಮ ಪಂಚಾಯತದ ಆರು ಜನ ಸದಸ್ಯರ ಪ್ರತಿಷ್ಟೆಯಿಂದ ಒಳ್ಳೆಯ ಕೆಲಸಕ್ಕೆ ಅಡ್ಡಿಯಾಗಿದೆ. ಅಡ್ಡಿಪಡಿಸುವವರು ಸ್ಥಳೀಯ ಶಾಸಕರ ಅನುಯಾಯಿಗಳಾಗಿದ್ದು, ಶಾಸಕರು ಅವರಿಗೆ ಕಿವಿಮಾತು ಹೇಳಬೇಕು’ ಎಂದು ವೀರಸಾವರ್ಕರ್ ಸಮಿತಿ ಸಂಚಾಲಕ ವಿ ಎನ್ ಭಟ್ಟ ನಡಿಗೆಮನೆ ಒತ್ತಾಯಿಸಿದರು.
‘ಗ್ರಾಮದ ಜನರು ಸಹ ಗ್ರಾಮಸಭೆಯಲ್ಲಿ ಪರವಾನಿಗೆಗೆ ಮನವಿ ಮಾಡಿದ್ದು, ಗ್ರಾಮಸಭೆಯಲ್ಲಿದ್ದ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ’ ಎಂದು ಉಮೇಶ ಭಾಗ್ವತ ಆರೋಪಿಸಿದರು. ‘ಯಾರೇ ಎಷ್ಟೇ ಕಾಟ ಕೊಟ್ಟರೂ ನಾವು ಕಾನೂನು ಪ್ರಕಾರ ಪ್ರತಿಮೆ ಸ್ಥಾಪನೆ ಮಾಡಿಯೇ ಮಾಡುತ್ತೇವೆ’ ಎಂದು ಸ್ಥಳೀಯ ಪಂಚಾಯತ ಸದಸ್ಯ ಜಿ ಆರ್ ಭಾಗ್ವತ ಹೇಳಿದರು.ಪ್ರ
ಮುಖರಾದ ತಿಮ್ಮಣ್ಣ ಕೋಮಾರ, ಮಹೇಶ ಗಾಂವ್ಕರ, ಕೆ ಟಿ ಹೆಗಡೆ, ನವೀನ ಕಿರಗಾರೆ, ತಿಮ್ಮಣ್ಣ ಗಾಂವ್ಕರ, ನಾರಾಯಣ ಭಟ್ಟ, ರಾಘವೇಂದ್ರ ಭಟ್ಟ, ರಾಜಶೇಖರ ಗಾಂವ್ಕರ ಹಾಗೂ ಸತೀಶ ಕುಂಬ್ರಿ ಇದ್ದರು.
Discussion about this post