ಕಾರವಾರ: `ಯೋಗ ಮತ್ತು ಆಯುರ್ವೇದ ಪದ್ಧತಿಗೆ ಉತ್ತರ ಕನ್ನಡ ಜಿಲ್ಲೆ ಸೂಕ್ತವಾಗಿದ್ದು, ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಗ ಮತ್ತು ಆಯುರ್ವೇದದ ಕುರಿತು ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆಯುಷ್ ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವ ಯೋಗ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಾಕೃತಿಕ ಸಂಪನ್ಮೂಲಗಳಿದೆ. ಹೆಚ್ಚಿನ ಔಷಧಿಯ ಸಸ್ಯಗಳು ಸಹ ಇದೆ. ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವಿದ್ದು, ಅದನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಯೋಗ ಮತ್ತು ಆಯುರ್ವೇದ ಪದ್ಧತಿಯನ್ನು ಪ್ರಚಾರ ಪಡಿಸಬೇಕು ಎಂದು ಹೇಳಿದರು.
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೂಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯ ಎಲ್ಲಾ ಯೋಗ ತರಬೇತುದಾರರು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಜೊತೆಗೆ ಜೂನ್ 20ರವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಯೋಗ ಉತ್ಸವ ನಡೆಸಲು ತಿಳಿಸಿದರು.
`ಯೋಗದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಉತ್ತಮ ಆರೋಗ್ಯ ವನ್ನು ಪಡೆಯಲು ಸಾಧ್ಯ. ಯೋಗದ ಮೂಲಕ ಹಲವು ಮಂದಿ ವಿಶೇಷ ಸಾಧನೆಗಳನ್ನು ಮಾಡಿದ್ದು, ಇವರ ಸಾಧನೆಗಳ ಬಗ್ಗೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಬೇಕು. ಯೋಗದಿಂದ ರೋಗ ಮುಕ್ತರಾದವರ ಅನಿಸಿಕೆಗಳನ್ನು ತಿಳಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ ಲಲಿತಾ ಇತರರು ಇದ್ದರು.
Discussion about this post