6

ವಿದ್ಯುತ್ ತಯಾರಿಕೆಗೆ ವಿದ್ಯುತ್ ಬಳಕೆ: ಸರ್ಕಾರದ ಮುಂದಿದೆ 8 ಸಾವಿರ ಕೋಟಿ ಖರ್ಚು ಮಾಡಿ ಕಾಡು ನಾಶ ಮಾಡುವ ಯೋಜನೆ!

`ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿದೆ. ಅದಾಗಿಯೂ 8005 ಕೋಟಿ ರೂ ವೆಚ್ಚ ಮಾಡಿ ಶರಾವತಿ ವನ್ಯಜೀವಿ ಧಾಮದ ಪರಿಸರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ ಸ್ಥಾಪನೆಗೆ ಸರ್ಕಾರ ಆಸಕ್ತಿವಹಿಸಿದೆ. ವಿದ್ಯುತ್ ತಯಾರಿಸಲು ವಿದ್ಯುತ್ ಬಳಕೆ ಮಾಡಿ ಅಣೆಕಟ್ಟುಗಳಿಗೆ ನೀರು ಹಾಯಿಸುವ ಯೋಜನೆ ಇದಾಗಿದ್ದು, ಈ ಯೋಜನೆ ಜಾರಿಯಾದರೆ ಆರ್ಥಿಕ ಲಾಭಕ್ಕಿಂತಲೂ ಪರಿಸರ ಹಾನಿಯೇ ಅಧಿಕ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಭೂಕುಸಿತ, ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜೊತೆ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗುವ ಬಗ್ಗೆ ಅರಿವಿದ್ದರೂ ಈ ಯೋಜನೆಗೆ ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗಿಲ್ಲ. ವಿರೋಧಿಸುವವರ ಅಲ್ಪ ಪ್ರಮಾಣದ ಜನರ ಧ್ವನಿ ಕಾಡಿನಿಂದ ಹೊರ ಬಂದಿಲ್ಲ. ಶರಾವತಿ ವನ್ಯ ಜೀವಿಧಾಮದ ಮೂವರು ಹಿರಿಯ ಅರಣ್ಯಾಧಿಕಾರಿಗಳು ಈ ಯೋಜನೆ ಅನುಷ್ಠಾನಕ್ಕೆ ಶಿಫಾರಸ್ಸು ಮಾಡುವ ಮೂಲಕ ತಮ್ಮ ಅಧಿಕಾರ ವ್ಯಾಪ್ತಿಯ ಕಾಡುಗಳ ನಾಶಕ್ಕೆ ಮುನ್ನುಡಿ ಬರೆದಿದ್ದಾರೆ. ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಯೋಜನಾ ಸ್ಥಳ ಪರಿಶೀಲಿಸಿ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಯೋಜನೆಯ ಪೂರಕ ವರದಿಯನ್ನು ಸಲ್ಲಿಸಿದ್ದಾರೆ.

ಈ ಯೋಜನೆಗೆ ಹೊನ್ನಾವರ ಅರಣ್ಯ ವಿಭಾಗವನ್ನು ಸೇರಿ ಒಟ್ಟೂ 54.14ಹೆಕ್ಟೇರ್ ಅರಣ್ಯ ಮತ್ತು 88.61ಹೆಕ್ಟೇರ್ ಅರಣ್ಯೇತರ ಭೂಮಿಯ ಅಗತ್ಯವಿದೆ. `ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಕಾರ್ಯಸಾಧುವಲ್ಲ’ ಎಂದು ಮೂವರು ಹಿರಿಯ ಅರಣ್ಯಾಧಿಕಾರಿಗಳು ಈ ಹಿಂದೆಯೇ ತಿಳಿಸಿ ಕೆಪಿಸಿಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದಾಗಿಯೂ ಈಗಿನ ಅಧಿಕಾರಿಗಳು `ಈ ಯೋಜನೆಯಿಂದ ಅನುಕೂಲ’ ಎಂದು ಶಿಫಾರಸ್ಸು ನೀಡಿದ್ದಾರೆ. ಅದರ ಪ್ರಕಾರ ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆಯೂ ಸಿಕ್ಕಿದೆ.

ಹೊಸದಾಗಿ ರಸ್ತೆಯ ನಿರ್ಮಾಣ, ಭೂಗತ ಕೊಳವೆಗಳ ಅಳವಡಿಕೆ, ಸುರಂಗ ಕೊರೆಯುವದರಿಂದ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ. ಇದರಿಂದ ಈಗಿರುವ ವಿದ್ಯುತ್ ವಿತರಣಾ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸಬೇಕಿದ್ದು, ಇದಕ್ಕಾಗಿ ಹೊಸ ಟವರ್ ನಿರ್ಮಾಣವನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಈಗಿನ ಪ್ರಸ್ತಾವನೆಗಿಂತಲೂ ಅಧಿಕ ಕಾಡು ನಾಶ ಖಚಿತ. ಯೋಜನೆಗೆ ಪೂರಕವಾಗಿ ಶಿಫಾರಸ್ಸು ಸಲ್ಲಿಸಿರುವ ಅಧಿಕಾರಿಗಳು ಕಾನೂನಾತ್ಮಕ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಜಾಣ ನಡೆಯನ್ನು ಅನುಸರಿಸಿದ್ದಾರೆ. `ಈ ಯೋಜನೆಯಿಂದ ಸಿಂಹಬಾಲದ ಸಿಂಗಳೀಕ ಸೇರಿದಂತೆ ಅಪರೂಪದ ಸಸ್ತನಿಗಳ ಚಲನ ವಲನಕ್ಕೆ ಅಡ್ಡಿಯಾಗಲಿದೆ. ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ 15000 ಮರಗಳನ್ನು ಯೋಜನೆಗಾಗಿ ಹನನ ಮಾಡಬೇಕಾಗುತ್ತದೆ’ ಎಂದು ವರದಿಯಲ್ಲಿ ಪ್ರಸ್ತಾಪಿಸಿ `ಉನ್ನತ ಅಧಿಕಾರಿಗಳು ಇದನ್ನು ಗಮನಿಸಬೇಕು’ ಎಂದು ಬರೆದು ಜಾರಿಕೊಂಡಿದ್ದಾರೆ.

`ಅಭಿವೃದ್ಧಿ ಯೋಜನೆಗಳಿಂದಾಗಿ ಪಶ್ಚಿಮ ಘಟ್ಟದ ಮೇಲೆ ಈಗಾಗಲೇ ಅನೇಕ ದುಷ್ಪರಿಣಾಮಗಳು ಉಂಟಾಗಿದೆ. ಜನ ವಸತಿಪ್ರದೇಶಕ್ಕೆ ವನ್ಯಜೀವಿಗಳ ವಲಸೆ, ಘಟ್ಟ ವ್ಯಾಪ್ತಿಯಲ್ಲಿ ಭೂ ಕುಸಿತದ ಹೆಚ್ಚಳ, ನದಿಪಾತ್ರದ ಜನರು ಪಡುತ್ತಿರುವ ಬವಣೆ ಈ ಯೋಜನೆಯಿಂದ ಹೆಚ್ಚಾಗಲಿದೆ. ಜೊತೆಗೆ ಅಪಾರ ಪ್ರಮಾಣದಲ್ಲಿ ಪರಿಸರ ನಾಶವೂ ಆಗಲಿದ್ದು, ಯೋಜನೆ ವಿರೋಧಿಸಿ ಜನಾಂದೋಲನ ಅಗತ್ಯ’ ಎಂದು ನೆರೆಸಂತ್ರಸ್ತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಹೇಳಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page